ಡಾ.ಸಾಯಿಗೀತಾರಿಗೆ ಉಪಾಧ್ಯಾಯ ದಂಪತಿ ಪ್ರಶಸ್ತಿ

ಉಡುಪಿ, ಜೂ.13: ಭಾಷಾ ಉಪನ್ಯಾಸಕಿ, ಜಾನಪದ ಸಾಹಿತಿ ಡಾ.ಸಾಯಿಗೀತಾ ಇವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಕೊಡಮಾಡುವ ಡಾ.ಯು.ಪಿ ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಹುಭಾಷಾ ವಿದ್ವಾಂಸರು, ತುಳುನಿಘಂಟು ರಚನೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿ ರುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ. ಉಪಾಧ್ಯಾಯ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಸಾಯಿಗೀತಾ, ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥರಾಗಿ, ಸಹಾಯಕ ಭಾಷಾ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
’ತುಳುವ ಪರಿಪುಡು ಪೊಣ್ಣಮೂಲಕಟ್’ ಎಂಬ ವಿಷಯದ ಕುರಿತು ಕುಪ್ಪಂನ ದ್ರಾವಿಡಿಯನ್ ವಿವಿಯಿಂದ ಪಿಎಚ್‌ಡಿ ಪದವಿ ಗಳಿಸಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ‘ಬಂಟರ ಇತಿಹಾಸ’ ಸಂಶೋಧನ ಯೋಜನೆಯಲ್ಲಿ ಸಂಶೋಧನ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ತುಳುವೆರ್ ತೆನಸ್ ಅಸರ್‌ದ ಪೊರ್ಲು ತಿರ್ಲ್’ ಜಾನಪದ ಅಕಾಡೆಮಿಯ ಜಾನಪದ ನಿಘಂಟು ಯೋಜನೆ, ಜಾನಪದ ವಿವಿಯ ‘ಕನ್ನಡ ಜಾನಪದ ನುಡಿಕೋಶ’ ಮುಂತಾದ ಯೋಜನೆಗಳಲ್ಲಿ ಸಂಶೋಧನಾ ಸಹಾಯಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
ಡಾ. ಸಾಯಿಗೀತಾ ಅವರು ನಿಟ್ಟೆ ವಿವಿ ತುಳು ಅಧ್ಯಯನ ಕೇಂದ್ರದ ಸಂಯೋಜಕರಾಗಿಯೂ ಜವಾಬ್ದಾರಿ ಹೊಂದಿ ದ್ದಾರೆ. ಅವರ 25ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಅಲ್ಲದೆ ಎರಡು ನೋಟಗಳು (ಕವನ ಸಂಗ್ರಹ), ಕನ್ನಡ ನುಡಿ ಕಲಿಕೆಗೊಂದು ಕೈಪಿಡಿ, ವೈದ್ಯಸಾರ (ಜನಪದ ಔಷಧಿ)ಮುಂತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ‘ಕರಾವಳಿಯ ಬೇಸಾಯದ ಹಾಡುಗಳು’ ಇದರ ಸಂಪಾದಕರಾಗಿ, ತುಳು ಜ್ಞಾತಿ ಪದಸಂಚಯ ಯೋಜನೆಯಲ್ಲಿ ಸಂಯೋಜಕರಾಗಿ ಸಂಪಾದಕರಾಗಿದ್ದಾರೆ.







