ಉಡುಪಿ: ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ

ಉಡುಪಿ, ಜೂ.13: ಮನೆಯಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಸಿಜೆಎಂ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2022ರ ಜನವರಿ 21ರಂದು 1 ಗಂಟೆಯ ಸುಮಾರಿಗೆ ಸಂತೋಷ ಪೂಜಾರಿ ಎಂಬಾತ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಕಕ್ಕುಂಜೆಯ ಪ್ರಮಿಳಾ ಬಂಗೇರಾರ ಮನೆಯ ಒಳಗೆ ಪ್ರವೇಶಿಸಿ, ಚಿನ್ನಾಭರಣ ಕಳವು ಮಾಡಿದ್ದು, ಉಡುಪಿ ನಗರಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಪ್ರಧಾನ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ವಿಘ್ನೇಶ್ ಕುಮಾರ್ ಅವರು ಆರೋಪಿ ಸಂತೋಷ ಪೂಜಾರಿಗೆ ಭಾ.ದಂ.ಸಂ. ಕಲಂ 380ರಡಿ 3 ವರ್ಷ ಮತ್ತು ಕಲಂ 454ರಡಿ 1 ವರ್ಷ ಹೀಗೆ ಒಟ್ಟು 4 ವರ್ಷ ಕಠಿಣ ಸಜೆ ಮತ್ತು 2000 ರೂ.ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ 2 ತಿಂಗಳ ಸಾಧಾರಣಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ಕೆ ವಾದ ಮಂಡಿಸಿದ್ದರು.







