ಮುಲ್ಕಿ: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು, ಬೆದರಿಕೆಯೊಡ್ಡಿದ ಪುತ್ರಿಯರು; ಪ್ರಕರಣ ದಾಖಲು

ಮುಲ್ಕಿ: ಜಾಗದ ವಿಚಾರವಾಗಿ ಹೆತ್ತ ತಾಯಿಗೆ ಪುತ್ರಿಯರಿಬ್ಬರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಮಕ್ಕಳಿಂದಲೇ ಹಲ್ಲೆಗೊಳಗಾದವರನ್ನು ಮನೋರಮಾ ಹೆನ್ರಿ ಎಂದು ಗುರುತಿಸಲಾಗಿದ್ದು, ಅವರ ಮಕ್ಕಳಾದ ಅನಿಟಾ ಸೋನ್ಸ್ ಮತ್ತು ಸ್ಯಾಂಡ್ರಾ ಬಂಗೇರ ಎಂಬವರು ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದವರು ಎಂದು ದೂರಲಾಗಿದೆ.
ಜಾಗದ ವಿಚಾರವಾಗಿ ತಾಯಿ ಮನೋರಮಾ ಮತ್ತು ಮಕ್ಕಳ ನಡುವೆ ಸೋಮವಾರ ಮಧ್ಯಾಹ್ನ ಜಗಳ ನಡೆದಿದ್ದು, ಅನಿಟಾ ಸೋನ್ಸ್ "ನನ್ನ ಮನೆಯ ಅಡುಗೆ ಕೋಣೆಯೊಳಗೆ ಅಕ್ರಮವಾಗಿ ಬಂದು ಅಲ್ಲಿದ್ದ ನನ್ನನ್ನು ದುರುಗುಟ್ಟಿ ನೋಡಿ, ತಡೆದು ನಿಲ್ಲಿಸಿ ಅವಳ ಕೈಯಲ್ಲಿದ್ದ ನಾಯಿಗೆ ಊಟ ಹಾಕುವ ತಟ್ಟೆಯಿಂದ ಬಲವಾಗಿ ಹೊಡೆದಿದ್ದಾಳೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಕೊಂದೆ ಹೋಗುವುದು” ಎಂದು ಜೀವ ಬೆದರಿಕೆ ಒಡ್ಡಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವೇಳೆ ಮನೆಯ ಹೊರಗಿದ್ದ ಇನ್ನೊಬ್ಬ ಮಗಳು ಸ್ಯಾಂಡ್ರಾ ಬಂಗೇರಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವುದಾಗಿ ಮನೋರಮಾ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.