ಮೋದಿ ಅಮೆರಿಕ ಭೇಟಿ ಸಂದರ್ಭ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಮಾನವ ಹಕ್ಕು ಸಂಘಟನೆ ಘೋಷಣೆ

ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸಕ್ಕೂ ಮುನ್ನ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಬಿಬಿಸಿ ಸಾಕ್ಷ್ಯಚಿತ್ರವನ್ನು ವಾಷಿಂಗ್ಟನ್ನಲ್ಲಿ ಪ್ರದರ್ಶಿಸಲಾಗುವುದು ಎಂದು ಎರಡು ಮಾನವ ಹಕ್ಕುಗಳ ಸಂಘಟನೆ ಘೋಷಿಸಿದೆ.
ಮೋದಿ ಅಮೆರಿಕ ಪ್ರವಾಸ ಜೂನ್ 21ರಂದು ಆರಂಭಗೊಳ್ಳಲಿದೆ. ಜೂನ್ 20ರಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು. ನೀತಿ ನಿರೂಪಕರು, ಪತ್ರಕರ್ತರು ಮತ್ತು ವಿಶ್ಲೇಷಕರನ್ನು ಆಹ್ವಾನಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂಬುದನ್ನು ಜ್ಞಾಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ ಮತ್ತು ‘ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್’ ಹೇಳಿದೆ.
2002ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದ ಗಲಭೆಗೆ ಸಂಬಂಧಿಸಿದ ಕೆಲವು ಅಂಶಗಳನ್ನು ತನಿಖೆ ನಡೆಸಿ ಈ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ ಎಂದು ಪ್ರತಿಪಾದಿಸಲಾಗಿದ್ದು ಭಾರತದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಇದೊಂದು ಪ್ರಚಾರದ ತುಣುಕು ಎಂದು ಕರೆದಿರುವ ಸರಕಾರ, ದೇಶದಲ್ಲಿ ಇದನ್ನು ವೀಕ್ಷಿಸದಂತೆ ತಡೆಹಿಡಿದಿದೆ.





