ಗಾಝಾ ಸಂಘರ್ಷದಲ್ಲಿ ಯುದ್ಧಾಪರಾಧದ ಸಾಧ್ಯತೆ: ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಖಂಡನೆ

ಬ್ರಿಟನ್: ಕಳೆದ ತಿಂಗಳು ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಗಳು ಯುದ್ಧ ಅಪರಾಧಕ್ಕೆ ಕಾರಣವಾಗಬಹುದು. ಇಸ್ರೇಲ್ನತ್ತ ರಾಕೆಟ್ ದಾಳಿ ನಡೆಸಿದ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರನ್ನೂ ಇದೇ ಅಪರಾಧಕ್ಕೆ ವಿಚಾರಣೆಗೆ ಗುರಿಪಡಿಸಬೇಕು ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಮಂಗಳವಾರ ಹೇಳಿದೆ.
ಗಾಝಾದಲ್ಲಿ ಇಸ್ರೇಲ್ ಪಡೆ ಮತ್ತು ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರ ಗುಂಪಿನ ನಡುವೆ ಮೇ 9ರಿಂದ 13ರವರೆಗೆ ನಡೆದ ಭೀಕರ ಗುಂಡಿನ ಸಂಘರ್ಷದಲ್ಲಿ ನಾಗರಿಕರ ಸಹಿತ ಕನಿಷ್ಟ 35 ಮಂದಿ ಮೃತಪಟ್ಟಿದ್ದರು. ಮಿಲಿಟರಿ ಕ್ರಮದ ಅಗತ್ಯವಿಲ್ಲದಿದ್ದರೂ ಇಸ್ರೇಲ್ ನಡೆಸಿದ ದಾಳಿಗಳು ನಾಗರಿಕ ಸಮುದಾಯದ ವಿರುದ್ಧದ ಸಾಮೂಹಿಕ ಶಿಕ್ಷೆಯ ಒಂದು ರೂಪವಾಗಿದೆ. ಇಸ್ರೇಲ್ ಮಿಲಿಟರಿಯ ಕಾರ್ಯಾಚರಣೆಯಲ್ಲಿ 103 ಮನೆಗಳ ಸಹಿತ 2,493 ವಸತಿ ಘಟಕಗಳು ಸಂಪೂರ್ಣ ನಾಶವಾಗಿದೆ.
ಇಸ್ರೇಲ್ ನಡೆಸಿದ ಅನಿರ್ದಿಷ್ಟ ವೈಮಾನಿಕ ದಾಳಿಯಲ್ಲಿ ಮಕ್ಕಳ ಸಹಿತ ಹಲವು ಫೆಲೆಸ್ತೀನಿಯನ್ ಪ್ರಜೆಗಳು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಇದು ಯುದ್ಧಾಪರಾಧವಾಗಿದೆ. ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಗುಂಪುಗಳು ಇಸ್ರೇಲನ್ನು ಗುರಿಯಾಗಿಸಿಕೊಂಡು ನಡೆಸಿದ ವಿವೇಚನಾರಹಿತ ರಾಕೆಟ್ ದಾಳಿಯನ್ನೂ ಯುದ್ಧಾಪರಾಧವೆಂದು ತನಿಖೆ ನಡೆಸಬೇಕು ಎಂದು ಲಂಡನ್ ಮೂಲದ ಮಾನವ ಹಕ್ಕುಗಳ ಸಂಘಟನೆ ಹೇಳಿದೆ.
ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ಪದೇಪದೇ ಯುದ್ಧಾಪರಾಧ ನಡೆಸುತ್ತಿದ್ದರೂ ಮತ್ತು ಗಾಝಾ ಪಟ್ಟಿಯಲ್ಲಿ 16 ವರ್ಷದಿಂದ ಕ್ರೂರವಾದ ಮತ್ತು ಅಕ್ರಮ ದಿಗ್ಬಂಧನ ನಡೆಸಿದ್ದರೂ ಯುದ್ಧಾಪರಾಧದಿಂದ ವಿನಾಯತಿ ಪಡೆಯುತ್ತಿರುವುದು ಮತ್ತಷ್ಟು ಉಲ್ಲಂಘನೆಗೆ ಪ್ರೇರಣೆಯಾಗುತ್ತಿದೆ ಮತ್ತು ಅನ್ಯಾಯವನ್ನು ದೀರ್ಘಕಾಲದವರೆಗೆ ಮುಂದುವರಿಸಿದೆ’ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರಾದೇಶಿಕ ನಿರ್ದೇಶಕಿ ಹೆಬಾ ಮೊರಾಯೆಫ್ ಹೇಳಿದ್ದಾರೆ.
ವರದಿಯನ್ನು ಸ್ವಾಗತಿಸುತ್ತೇವೆ. ಫೆಲೆಸ್ತೀನಿಯನ್ ಜನರ ವಿರುದ್ಧ ಇಸ್ರೇಲ್ ಮಾಡಿದ ಅಪರಾಧಗಳ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ನಮ್ಮ ಹೊಣೆಯನ್ನು ನಿರ್ವಹಿಸುತ್ತಿದ್ದೇವೆ ಎಂದು ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ. ಗಾಝಾ ಪಟ್ಟಿಯಲ್ಲಿ ಸುಮಾರು 2.3 ದಶಲಕ್ಷ ಫೆಲೆಸ್ತೀನೀಯರು ವಾಸಿಸುತ್ತಿದ್ದಾರೆ.
►ಫೆಲೆಸ್ತೀನಿಯನ್ ಕುಟುಂಬಗಳಿಗೆ ಉಚ್ಛಾಟನೆಯ ಭೀತಿ: ವಿಶ್ವಸಂಸ್ಥೆ
ಆಕ್ರಮಿತ ಜೆರುಸಲೇಂನಲ್ಲಿ ನೂರಾರು ಫೆಲೆಸ್ತೀನಿಯನ್ ಕುಟುಂಬಗಳು ಬಲವಂತದ ಒಕ್ಕಲೆಬ್ಬಿಸುವಿಕೆಯ ಅಪಾಯದಲ್ಲಿವೆ ಎಂದು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಕ್ಕೆ ವಿಶ್ವಸಂಸ್ಥೆಯ ಮಾನವೀಯ ಸಂಯೋಜಕಿ ಹೇಳಿದ್ದಾರೆ.
ತಮ್ಮ ತಂಡವು ಇತರ ರಾಜತಾಂತ್ರಿಕ ನಿಯೋಗಗಳ ಜತೆಗೆ ಆಕ್ರಮಿತ ಪೂರ್ವ ಜೆರುಸಲೇಂನ ಓಲ್ಡ್ಸಿಟಿ ಪ್ರದೇಶಕ್ಕೆ ಭೇಟಿ ನೀಡಿದೆ. ಇಲ್ಲಿ ಹಲವು ದಶಕಗಳಿಂದ ನೆಲೆಸಿರುವ ಸುಮಾರು 150 ಫೆಲೆಸ್ತೀನಿಯನ್ ಕುಟುಂಬಗಳು ಇಸ್ರೇಲ್ ಅಧಿಕಾರಿಗಳಿಂದ ಬಲವಂತದ ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರದ ಭೀತಿಯಲ್ಲಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ನ ವಸಾಹತು ನೀತಿ ಮತ್ತು ಬಲವಂತದ ಒಕ್ಕಲೆಬ್ಬಿಸುವಿಕೆ ಸೇರಿದಂತೆ ಈ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳಿಗೆ ಯುರೋಪಿಯನ್ ಯೂನಿಯನ್ನ ನಿಯೋಗವೂ ವಿರೋಧ ವ್ಯಕ್ತಪಡಿಸಿದೆ.