ಟೆಸ್ಟ್ ನಾಯಕತ್ವ ತ್ಯಜಿಸಿದ್ದೇಕೆ ಎಂದು ಕೊಹ್ಲಿ ಮಾತ್ರ ಬಹಿರಂಗಪಡಿಸಬಹುದು: ಸೌರವ್ ಗಂಗುಲಿ

ಹೊಸದಿಲ್ಲಿ: 2022ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸದ ನಂತರ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದಾಗ ಈ ಆಘಾತಕಾರಿ ಹೆಜ್ಜೆಯು ಭಾರತೀಯ ಕ್ರಿಕೆಟ್ ಮಂಡಳಿಯ ಪ್ರಮುಖರು ಸೇರಿದಂತೆ ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿತ್ತು. ಕೊಹ್ಲಿ ಅವರ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ಘೋಷಣೆ ಕ್ರಿಕೆಟ್ ಮಂಡಳಿಗೆ ಆಶ್ಚರ್ಯವುಂಟು ಮಾಡಿತ್ತು. ಕ್ರಿಕೆಟ್ ಮಂಡಳಿ ಕೂಡ ಆಗ ಪರ್ಯಾಯ ನಾಯಕನ ಆಯ್ಕೆಗೆ ಸಿದ್ಧತೆ ನಡೆಸಿರಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗುಲಿ ಇತ್ತೀಚೆಗೆ ಬಹಿರಂಗಪಡಿಸಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧ 209 ರನ್‌ನಿಂದ ಸೋತ ನಂತರ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿಗೆ ಮತ್ತೆ ಟೆಸ್ಟ್ ನಾಯಕತ್ವ ನೀಡಬೇಕೆಂದು ಒತ್ತಾಯಿಸುತ್ತಿರುವ ನಡುವೆ ಗಂಗುಲಿ ಈ ಹೇಳಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವ ತೊರೆದಾಗ ಬಿಸಿಸಿಐ ಅದಕ್ಕೆ ಸಿದ್ಧತೆ ಮಾಡಿಕೊಂಡಿರಲಿಲ್ಲ.
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ನಮಗೂ ಅದು ಅನಿರೀಕ್ಷಿತವಾಗಿತ್ತು. ನಾಯಕತ್ವ ಏಕೆ ತ್ಯಜಿಸಿದರು ಎಂದು ವಿರಾಟ್ ಕೊಹ್ಲಿ ಅವರೇ ಉತ್ತರಿಸಬೇಕು. ನಾಯಕತ್ವ ತ್ಯಜಿಸುವುದು ಕೊಹ್ಲಿ ಅವರ ವೈಯಕ್ತಿಕ ನಿರ್ಧಾರವಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿರುವ ಕುರಿತಾಗಿ ಈಗ ಮಾತನಾಡುವುದು ವ್ಯರ್ಥ. ಆಯ್ಕೆದಾರರು ಭಾರತ ತಂಡದ ನಾಯಕನನ್ನು ನೇಮಿಸಬೇಕಾಗಿತ್ತು. ಆ ಸಮಯದಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಆಯ್ಕೆಯಾಗಿದ್ದರು ಎಂದು ಡಬ್ಲುಟಿಸಿ ಫೈನಲ್‌ನ ನಂತರ ‘ಆಜ್‌ತಕ್’ಗೆ ನೀಡಿದ ಸಂದರ್ಶನದಲ್ಲಿ ಗಂಗುಲಿ ಹೇಳಿದರು.
ಕೊಹ್ಲಿ ಟೆಸ್ಟ್ ಇತಿಹಾಸದಲ್ಲಿ ನಾಲ್ಕನೇ ಅತ್ಯಂತ ಯಶಸ್ವಿ ನಾಯಕನಾಗಿ ತನ್ನ ಅವಧಿಯನ್ನು ಪೂರ್ಣಗೊಳಿಸಿದ್ದರು. ಭಾರತದ ನಾಯಕನಾಗಿ ಅವರು 68 ಪಂದ್ಯಗಳನ್ನು ಆಡಿದ್ದು, 40ರಲ್ಲಿ ಗೆಲುವು ಹಾಗೂ 11ರಲ್ಲಿ ಡ್ರಾ ಸಾಧಿಸಿದ್ದರು. 34ರ ಹರೆಯದ ಕೊಹ್ಲಿ ಅವರು ಹೆಚ್ಚು ಟೆಸ್ಟ್ ಪಂದ್ಯಗಳನ್ನು ಜಯಿಸಿದ ವಿಶ್ವದ ಕ್ರಿಕೆಟ್ ನಾಯಕರ ಪಟ್ಟಿಯಲ್ಲಿ ಗ್ರೇಮ್ ಸ್ಮಿತ್, ರಿಕಿ ಪಾಂಟಿಂಗ್ ಹಾಗೂ ಸ್ಟೀವ್ ವಾ ನಂತರದ ಸ್ಥಾನದಲ್ಲಿದ್ದಾರೆ.







