ಚಿಕ್ಕಮಗಳೂರು | ಪ್ಯಾರ ಮೆಡಿಕಲ್ ಕಾಲೇಜು ಮುಖ್ಯಸ್ಥರಿಂದ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಗೆ ಹಲ್ಲೆ: ಆರೋಪ
ಆಕೆಯ ತಲೆ ಮೇಲೆ 3 ಬಕೆಟ್ ನೀರು ಹಾಕಿ ದೌರ್ಜನ್ಯ; ವಿದ್ಯಾರ್ಥಿನಿ ತಾಯಿಯಿಂದ ದೂರು

ಚಿಕ್ಕಮಗಳೂರು, ಜೂ.13: ಕ್ಷುಲ್ಲಕ ಕಾರಣಕ್ಕೆ ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಗೆ ಹಲ್ಲೆ ಮಾಡಿರುವುದಲ್ಲದೇ ಆಕೆಯ ತಲೆ ಮೇಲೆ ಮೂರು ಬಕೆಟ್ ನೀರು ಹಾಕಿ ಕಾಲೇಜಿನ ಮುಖ್ಯಸ್ಥರೇ ದೌರ್ಜನ್ಯ ನಡೆಸಿದ್ದಾರೆಂದು ವಿದ್ಯಾರ್ಥಿನಿಯ ಪೋಷಕರು ದೂರಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ದೂರು ದಾಖಲಿಸಿಕೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿದ್ದಾರೆ.
ನಗರದ ಎಐಟಿ ಕಾಲೇಜು ವೃತ್ತದಲ್ಲಿರುವ ಸಹ್ಯಾದ್ರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸೋಮವಾರ ಕಾಲೇಜಿನ ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಅಕ್ಕಪಕ್ಕ ನೋಡಿದ್ದಾಳೆಂದು ಆರೋಪಿಸಿ ಕಾಲೇಜಿನ ಮುಖ್ಯಸ್ಥೆಯೊಬ್ಬರು ಹಲ್ಲೆ ಮಾಡಿದ್ದು, ಇದರಿಂದ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ಈ ವೇಳೆ ವಿದ್ಯಾರ್ಥಿನಿ ನಾಟಕ ಆಡುತ್ತಿದ್ದಾಳೆಂದು ಹೇಳಿ ಆಕೆಯನ್ನು ಎತ್ತಿಕೊಂಡು ಹೋಗಿ ಬಾತ್ ರೂಮಿನಲ್ಲಿ ಮಲಗಿಸಿ ಮೂರು ಬಕೆಟ್ ನೀರು ಹಾಕಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿನಿ ಮಾನಸಿಕವಾಗಿ ಕುಗ್ಗಿಹೋಗಿದ್ದು, ಸಂಜೆ ಆಕೆಗೆ ಬೇರೆಯವರ ಬಟ್ಟೆ ಬದಲಾಯಿಸಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ತಾಯಿ ಆರೋಪಿಸಿದ್ದು, ಘಟನೆ ಬಳಿಕ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಘಟನೆ ಸಂಬಂಧ ಕಾಲೇಜು ಮುಖ್ಯಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಮಂಗಳವಾರ ಈ ಸಂಬಂಧ ಎಸ್ಪಿಬಳಿ ಮಾತನಾಡಿದ್ದು, ಅವರ ಸೂಚನೆ ಮೇರೆಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ವಿದ್ಯಾರ್ಥಿನಿ ತಾಯಿ ಸುದ್ದಿಗಾರರ ಬಳಿ ಅಳಲು ತೋಡಿ ಕೊಂಡರು.
''ಅಲ್ಲಂಪುರದ ನಿವಾಸಿಯಾಗಿರುವ ನಾನು ಗಂಡನನ್ನು ಕಳೆದುಕೊಂಡಿದ್ದೇನೆ. ಮಕ್ಕಳ ಭವಿಷ್ಯಕ್ಕಾಗಿ ಕೂಲಿ ಕೆಲಸ ಮಾಡಿ 30 ಸಾವಿರ ಶುಲ್ಕ ಕಟ್ಟಿ ಮಗಳನ್ನು ಪ್ಯಾರಾ ಮೆಡಿಕಲ್ ಕಾಲೇಜಿ ಗೆ ಸೇರಿಸಿದ್ದೇನೆ. ಮಗಳಿಗೆ ಮೈಗ್ರೇನ್ ತಲೆ ನೋವು ಇದ್ದು, ತಲೆ ನೋವು ಜೋರಾದಾಗ ಕುಸಿದು ಬೀಳುತ್ತಾಳೆ. ಕಾಲೇಜಿನ ಮುಖ್ಯಸ್ಥರು ನನ್ನ ಮಗಳಿಗೆ ವಿನಾಕಾರಣ ಕಿರುಕುಳ ನೀಡಿದ್ದು, ಆಕೆಯ ಜೀವಕ್ಕೆ ಹೆಚ್ಚುಕಮ್ಮಿಯಾದರೆ ಯಾರು ಹೊಣೆ, ಆಕೆಯ ಬಗ್ಗೆ ದೂರಿದ್ದರೆ ನಮ್ಮ ಬಳಿ ದೂರು ಹೇಳ ಬಹುದಿತ್ತು. ಬದಲಿಗೆ ಆಕೆಗೆ ಎಲ್ಲರ ಮುಂದೆ ಹಲ್ಲೆ ಮಾಡಿರುವುದಲ್ಲದೇ ಮೈಮೇಲೆ ನೀರು ಹಾಕಿ ದೌರ್ಜನ್ಯ ನಡೆಸಿರುವುದು ಯಾವ ನ್ಯಾಯ, ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು'' ಎಂದು ಅವಲತ್ತುಕೊಂಡರು.







