ನೀಟ್ ಫಲಿತಾಂಶ: ರಾಜ್ಯದ ಧ್ರುವ್ ಅಡ್ವಾಣಿಗೆ 5ನೇ ರ‍್ಯಾಂಕ್

ಹೊಸದಿಲ್ಲಿ, ಜೂ.13: ವೈದ್ಯಕೀಯ ಪದವಿ ಶಿಕ್ಷಣಕ್ಕಾಗಿನ ರಾಷ್ಟ್ರೀಯ ಪ್ರವೇಶಾತಿ ಪರೀಕ್ಷೆ ನೀಟ್ (ಯುಜಿ)ನ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ.
ತಮಿಳುನಾಡಿನ ಪ್ರಭಂಜನ್ ಜೆ. ಹಾಗೂ ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಅವರು 720 (ಶೇ.99.99) ಅಂಕಗಳೊಂದಿಗೆ ಪ್ರಥಮ ಬ್ಯಾಂಕ್ ಹಂಚಿಕೊಂಡಿದ್ದಾರೆ. ತಮಿಳುನಾಡಿನ ಕೌಸ್ತವ್ ಬೌರಿ 716 ಅಂಕಗಳೊಂದಿಗೆ 3ನೇ ರ‌್ಯಾಂಕ್ ಪಡೆದಿದ್ದಾರೆ.
ನೀಟ್ ಪರೀಕ್ಷೆಗೆ ಒಟ್ಟು 720 ಅಂಕಗಳಿವೆ. ಕರ್ನಾಟಕದ ಧ್ರುವ್ ಅಡ್ವಾಣಿ 715 ಅಂಕಗಳೊಂದಿಗೆ ಐದನೇ ರ‌್ಯಾಂಕ್ ಗಳಿಸಿದ್ದಾರೆ. ಈ ವರ್ಷ 20,38,596 ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದು, 11.45 ಲಕ್ಷ ಮಂದಿ ಉತ್ತೀರ್ಣರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಗುಷ್ಠ ಸಂಖ್ಯೆಯ ಅಭ್ಯರ್ಥಿಗಳು (1.39 ಲಕ್ಷ) ಉತ್ತೀರ್ಣರಾಗಿದ್ದಾರೆ.
ಮಹಾರಾಷ್ಟ್ರ (1.31ಲಕ್ಷ) ಹಾಗೂ ರಾಜಸ್ಥಾನ (1 ಲಕ್ಷಕ್ಕೂ ಅಧಿಕ) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶಾತಿ ಪರೀಕ್ಷೆ (ಪದವಿ)ಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಆಯೋಜಿಸುತ್ತದೆ. ಭಾರತದ 499 ನಗರಗಳಲ್ಲಿ ಮೇ 7ರಂದು ನೀಟ್ ಪರೀಕ್ಷೆ ನಡೆದಿತ್ತು. ಈ ವರ್ಷದ ನೀಟ್ ಪರೀಕ್ಷೆಯನ್ನು ಕನ್ನಡ, ತೆಲುಗು, ಮಲಯಾಳಂ, ಉರ್ದು, ಮರಾಠಿ, ಗುಜರಾತ್, ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ ಆಯೋಜಿಸಲಾಗಿತ್ತು. ಭಾರತದ ಹೊರಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕುವೈತ್‌ನಗರ, ಸಿಂಗಾಪುರ, ದುಬೈ, ಶಾರ್ಜಾ, ರಿಯಾದ್, ಮಸ್ಕತ್, ಕೊಲಂಬೊ ಸೇರಿದಂತೆ ವಿದೇಶಗಳ 14 ನಗರಗಳಲ್ಲಿಯೂ ನೀಟ್ ಪರೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ; ನೀಟ್ ಫಲಿತಾಂಶ; ಅಗ್ರಸ್ಥಾನ ಹಂಚಿಕೊಂಡ ತಮಿಳುನಾಡು, ಆಂಧ್ರ ವಿದ್ಯಾರ್ಥಿಗಳು







