ವರ್ಕ್ ಫ್ರಮ್ ಹೋಮ್ ಇಲ್ಲ ಎಂಬ ಕಾರಣಕ್ಕೆ ದೇಶದ ಅತಿದೊಡ್ಡ ಐಟಿ ಕಂಪನಿ ತೊರೆದ ಹಲವು ಮಹಿಳಾ ಉದ್ಯೋಗಿಗಳು

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಜಾರಿಗೆ ಬಂದ 'ವರ್ಕ್ ಫ್ರಮ್ ಹೋಮ್' ಪರಿಕಲ್ಪನೆಗೆ ಭಾರತೀಯ ಐಟಿ ಉದ್ಯೋಗಿಗಳು ಹೊಂದಿಕೊಂಡಿದ್ದು, ಈ ಸೌಲಭ್ಯ ಇಲ್ಲ ಎಂಬ ಕಾರಣಕ್ಕಾಗಿ ಬಹಳಷ್ಟು ಮಂದಿ ಮಹಿಳಾ ಉದ್ಯೋಗಿಗಳು ದೇಶದ ಅತಿ ದೊಡ್ಡ ಸಾಫ್ಟ್‍ವೇರ್ ಕಂಪನಿ ತೊರೆದಿರುವ ಅಂಶ ಬಹಿರಂಗವಾಗಿದೆ.
ಸಾಂಕ್ರಾಮಿಕ ಮುಗಿದ ಬಳಿಕ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಳ್ಳಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ ಮುಂದಾದಾಗ, ದೊಡ್ಡ ಸಂಖ್ಯೆಯ ಮಹಿಳಾ ಉದ್ಯೋಗಿಗಳು ಉದ್ಯೋಗ ತೊರೆದಿದ್ದಾರೆ. ಪುರುಷ ಉದ್ಯೋಗಿಗಳಷ್ಟೇ ಸಂಖ್ಯೆಯಲ್ಲಿದ್ದ ಅಥವಾ ಕಡಿಮೆ ಸಂಖ್ಯೆಯಲ್ಲಿದ್ದ ಮಹಿಳಾ ಉದ್ಯೋಗಿಗಳ ಪ್ರಮಾಣ ಮತ್ತಷ್ಟು ಕಡಿಮೆಯಾಗಲು ಇದು ಕಾರಣವಾಗಿದೆ.
"ಸಾಂಕ್ರಾಮಿಕದ ಅವಧಿಯಲ್ಲಿ ಮನೆಯಿಂದಲೇ ಉದ್ಯೋಗ ನಿರ್ವಹಿಸುವ ವೇಳೆ ಅನಾಯಾಸವಾಗಿ ಮಹಿಳೆಯರ ಮನೆಕೆಲಸಗಳೂ ನಡೆಯುತ್ತಿತ್ತು. ಇದುವೇ ಮಹಿಳೆಯರು ಕಚೇರಿಗಳಿಗೆ ಮರಳದೇ ಇರಲು ಕಾರಣವಾಗಿದೆ" ಎಂದು ಟಿಸಿಎಸ್‍ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಅವರು ಕಂಪನಿಯ ವಾರ್ಷಿಕ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಲಿಂಗವೈವಿಧ್ಯವನ್ನು ಉತ್ತೇಜಿಸುವ ನಮ್ಮ ಪ್ರಯತ್ನಗಳಿಗೆ ಇದು ಬಹುದೊಡ್ಡ ಹಿನ್ನಡೆ. ಆದರೆ ಈ ನಮ್ಮ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ, ಪ್ರತಿಭೆಗಳನ್ನು ಅದರಲ್ಲೂ ಮುಖ್ಯವಾಗಿ ಮಹಿಳಾ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಹಲವು ಕಂಪನಿಗಳಿಗೆ ನೆರವಾಗಿದೆ. ಈ ಹೈಬ್ರೀಡ್ ವಾತಾವರಣದಲ್ಲಿ ಕಚೇರಿ ಹಾಗೂ ಗೃಹಕೃತ್ಯಗಳನ್ನು ನಿಭಾಯಿಸುವುದು ಸುಲಭ ಎಂಬ ನಿರ್ಧಾರಕ್ಕೆ ಮಹಿಳೆಯರು ಬಂದಿದ್ದಾರೆ. ಇದರಿಂದಾಗಿ ಮಹಿಳೆಯರು ಉದ್ಯೋಗ ತೊರೆಯುತ್ತಿದ್ದು, ಈಗಾಗಲೇ ಕಡಿಮೆ ಇರುವ ಮಹಿಳಾ ಉದ್ಯೋಗಿಗಳ ಪ್ರಮಾಣ ಇನ್ನಷ್ಟು ಕುಸಿಯುವ ಅಪಾಯವಿದೆ.
ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಶೇಕಡ 24ರಷ್ಟಿದ್ದರೆ, ಚೀನಾದಲ್ಲಿ ಇರುವ ಶೇಕಡ 61ಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ ಎಂದು ವಿಶ್ವಬ್ಯಾಂಕ್ ಅಂಕಿ ಅಂಶಗಳು ಹೇಳುತ್ತವೆ. ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ದೇಶದ ಆರ್ಥಿಕ ಪ್ರಗತಿಗೆ ಇದು ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ.







