ಬೈಪರ್‌ಜೋಯ್ ಚಂಡಮಾರುತ ಅಪ್ಪಳಿಸುವ ನಿರೀಕ್ಷೆ: ಗುಜರಾತ್ ನಲ್ಲಿ 35,000 ಕ್ಕೂ ಹೆಚ್ಚು ಜನರ ಸ್ಥಳಾಂತರ

ಅಹಮದಾಬಾದ್: ಬೈಪರ್‌ಜೋಯ್ ಚಂಡಮಾರುತವು ಗುರುವಾರ ಸಂಜೆ ಗುಜರಾತ್‌ನ ಸೌರಾಷ್ಟ್ರ ಹಾಗೂ ಕಚ್ ಪ್ರದೇಶಗಳು ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಚಂಡಮಾರುತವು ಪ್ರಸ್ತುತ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿದೆ, ಇದು ಪೋರಬಂದರ್‌ನಿಂದ ನೈಋತ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ.
ಮಂಗಳವಾರ ಗುಜರಾತ್‌ನ ಅಧಿಕಾರಿಗಳು ಕರಾವಳಿ ಪ್ರದೇಶಗಳಲ್ಲಿ ನೆಲೆಸಿರುವ 37,800 ಜನರನ್ನು ತಾತ್ಕಾಲಿಕ ಆಶ್ರಯ ತಾಣಕ್ಕೆ ಸ್ಥಳಾಂತರಿಸಿದ್ದಾರೆ. ಪ್ರಬಲ ಚಂಡಮಾರುತವು ಗುರುವಾರ ಸಂಜೆ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಭೂಕುಸಿತವನ್ನು ಉಂಟು ಮಾಡುವ ನಿರೀಕ್ಷೆಯಿದೆ.
ಸೌರಾಷ್ಟ್ರ ಹಾಗೂ ಕಚ್‌ಗೆ IMD ರೆಡ್ ಅಲರ್ಟ್ ಘೋಷಿಸಿದೆ. ಅಧಿಕಾರಿಗಳ ಪ್ರಕಾರ, ಹಲವಾರು NDRF ಹಾಗೂ SDRF ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ. ಪರಿಹಾರ ಕಾರ್ಯಗಳಲ್ಲಿ ಸಹಾಯ ಮಾಡಲು ಸೇನೆಯು ಸಿದ್ಧವಾಗಿದೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಪ್ರವಾಹ ಪರಿಹಾರ ಕಾಲಮ್‌ಗಳನ್ನು ಇರಿಸಿದೆ. ಸೈನ್ಯವು ತನ್ನ ಯೋಜನೆಗಳನ್ನು ನಗರಾಡಳಿತ ಮತ್ತು NDRF ನೊಂದಿಗೆ ಸಂಯೋಜಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಚಂಡಮಾರುತಕ್ಕೆ ಗುಜರಾತ್‌ನ ಸನ್ನದ್ಧತೆಯನ್ನು ಪರಿಶೀಲಿಸಿದರು.







