ನೀಟ್ ಫಲಿತಾಂಶ; ಅಗ್ರಸ್ಥಾನ ಹಂಚಿಕೊಂಡ ತಮಿಳುನಾಡು, ಆಂಧ್ರ ವಿದ್ಯಾರ್ಥಿಗಳು

ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) 2023ನೇ ವರ್ಷದ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆ (ನೀಟ್-ಯುಜಿ)ಯ ಫಲಿತಾಂಶ ಪ್ರಕಟಿಸಿದ್ದು, ತಮಿಳುನಾಡಿನ ಪ್ರಬಂಜನ್ ಜೆ ಹಾಗೂ ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಶೇಕಡಾ 99.99 ಅಂಕಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಪರೀಕ್ಷೆ ಬರೆದ 20.38 ಲಕ್ಷ ಅಭ್ಯರ್ಥಿಗಳ ಪೈಕಿ 11.45 ಲಕ್ಷ ಮಂದಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಉತ್ತರ ಪ್ರದೇಶದಿಂದ ಗರಿಷ್ಠ ಸಂಖ್ಯೆಯ (1.39 ಲಕ್ಷ ಮಂದಿ) ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ಮಹಾರಾಷ್ಟ್ರ (1.31 ಲಕ್ಷ) ಹಾಗೂ ರಾಜಸ್ಥಾನ (1 ಲಕ್ಷಕ್ಕೂ ಅಧಿಕ) ನಂತರದ ಸ್ಥಾನಗಳಲ್ಲಿವೆ. ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಅತ್ಯಧಿಕ ಜನಸಂಖ್ಯೆ ಹೊಂದಿರುವ ಎರಡು ರಾಜ್ಯಗಳಾಗಿದ್ದು, ರಾಜಸ್ಥಾನ ಅಗ್ರ ಜನಸಂಖ್ಯೆ ಹೊಂದಿದ 10 ರಾಜ್ಯಗಳ ಪೈಕಿ ಒಂದಾಗಿದೆ.
ವಿದೇಶಗಳ 14 ನಗರಗಳು ಸೇರಿದಂತೆ 499 ನಗರಗಳ 4097 ಪರೀಕ್ಷಾ ಕೇಂದ್ರಗಳಲ್ಲಿ ನೀಟ್-ಯುಜಿ ಪರೀಕ್ಷೆ ಮೇ 7ರಂದು ನಡೆದಿತ್ತು. ಏಳು ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮಗಳನ್ನು ನಡೆಸಿರುವುದು ಪತ್ತೆಯಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎನ್ ಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಹೀಗೆ 13 ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು. ಭಾರತ ಹೊರತುಪಡಿಸಿ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ, ಲಾಗೋಸ್, ಮನಾಮ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ, ದುಬೈ ಹಾಗೂ ಕುವೈತ್ ನಲ್ಲೂ ಪರೀಕ್ಷೆ ನಡೆಲಾಗಿತ್ತು.
ಎನ್ ಟಿಎ ಅಖಿಲ ಭಾರತ ಮಟ್ಟದ ರ‍್ಯಾಂಕ್ ಗಳನ್ನು ನೀಡಿದ್ದು, ಪ್ರವೇಶಾತಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶಗಳ ಎಂಬಿಬಿಎಸ್ ಹಾಗೂ ಬಿಡಿಎಸ್ ಸೀಟುಗಳಿಗೆ ರ‍್ಯಾಂಕ್ ಆಧರಿಸಿ ಮೆರಿಟ್ ಲಿಸ್ಟ್ ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
"ಅಭ್ಯರ್ಥಿಗಳು ತಮ್ಮ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸುವಾಗ, ರಾಜ್ಯ ವರ್ಗಗಳ ಪಟ್ಟಿಯ ಅನ್ವಯ ತಮ್ಮ ವರ್ಗಗಳನ್ನು ಉಲ್ಲೇಖಿಸಬೇಕು. ರಾಜ್ಯದ ಕೌನ್ಸಿಲಿಂಗ್ ಅಧಿಕಾರಿಗಳು ಇದರ ಅನ್ವಯ ಮೆರಿಟ್ ಲಿಸ್ಟ್ ಸಿದ್ಧಪಡಿಸುತ್ತಾರೆ. ರಾಷ್ಟ್ರಮಟ್ಟದಲ್ಲೂ ಇದೇ ಅನ್ವಯಿಸುತ್ತದೆ. ಇದರಲ್ಲಿ ಎನ್ ಟಿಎ ಪಾತ್ರ ಇರುವುದಿಲ್ಲ" ಎಂದು ಎನ್ ಟಿಎ ಸ್ಪಷ್ಟಪಡಿಸಿದೆ.







