ಜಲ ಮಾಲಿನ್ಯಕ್ಕೆ ಕಾರಣವಾದ ಭಾರತೀಯ ಸೇನೆಗೆ ದಂಡ ವಿಧಿಸಿದ ಲಡಾಖ್ ಕೇಂದ್ರಾಡಳಿತ ಪ್ರದೇಶ

ಹೊಸದಿಲ್ಲಿ: ಅಸಾಮಾನ್ಯ ಬೆಳವಣಿಗೆಯೊಂದರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವು ಭಾರತೀಯ ಸೇನೆಗೆ ದಂಡ ವಿಧಿಸಿದೆ ಹಾಗೂ ಜಲ ಮಾಲಿನ್ಯಕ್ಕೆ ಕಾರಣವಾಗಿದ್ದಕ್ಕೆ ಶೋಕಾಸ್ ನೋಟಿಸ್ ನೀಡಿದೆ.
ಕಳೆದ ವಾರ ನೀಡಲಾಗಿರುವ ಶೋಕಾಸ್ ನೋಟಿಸ್ ಅನ್ನು ಲಡಾಖ್‌ನ ಲೇಹ್‌ನಲ್ಲಿರುವ ಸ್ಟೇಷನ್ ಕಮಾಂಡರ್‌ಗೆ ಕಳುಹಿಸಲಾಗಿದೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ ಕ್ಲಿಪ್ ಅನ್ನು ಉಲ್ಲೇಖಿಸಿದೆ.
“ಸೇನೆಯ ಕೊಳಚೆ ನೀರು ಸಾಗಿಸುವ ಕಂಟೈನರ್ ಸಂಸ್ಕರಿಸದ ಕೊಳಚೆ ನೀರನ್ನು G.H. ರಸ್ತೆಯ ಸ್ಕಾರ ಸ್ಟ್ರೀಮ್ ನಲ್ಲಿ ನೇರವಾಗಿ ಹೊರಹಾಕುವ ಕೆಲಸಯಲ್ಲಿ ತೊಡಗಿದೆ. ಇದು ತೀವ್ರ ಜಲಮಾಲಿನ್ಯಕ್ಕೆ ಕಾರಣವಾಗುತ್ತದೆ" ಎಂದು ತಿಳಿಸಲಾಗಿದೆ.
" ವೀಡಿಯೊ ಕ್ಲಿಪ್ ವೇಗವಾಗಿ ಹರಡಿದೆ, ಸಾಕಷ್ಟು ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸುತ್ತಿದೆ ಹಾಗೂ ಆನ್‌ಲೈನ್ ಸಮುದಾಯದಲ್ಲಿ ಸಾಕಷ್ಟು ಕಳವಳಕ್ಕೆ ಕಾರಣವಾಗಿದೆ'' ಎಂದು ನೋಟಿಸ್ ಹೇಳಿದೆ.
ಪರಿಸರ (ರಕ್ಷಣೆ) ಕಾಯಿದೆ, 1986 ರ ಅಡಿಯಲ್ಲಿ ವಿವಿಧ ಮೂಲಗಳಿಂದ ಪರಿಸರ ಮಾಲಿನ್ಯಕಾರಕಗಳ ಸಾಮಾನ್ಯ ವಿಸರ್ಜನೆಯ ಮಾನದಂಡಗಳನ್ನು ವಿವರಿಸುವ ಕೇಂದ್ರ ಸರಕಾರದ ಆದೇಶವನ್ನು ಲಡಾಖ್ ಆಡಳಿತ ಮತ್ತು ಮಾಲಿನ್ಯ ನಿಯಂತ್ರಣ ಸಮಿತಿಯು ಉಲ್ಲೇಖಿಸಿದೆ.
ಮಾಲಿನ್ಯ ನಿಯಂತ್ರಣ ಸಮಿತಿಯು ಪರಿಸರ ಹಾನಿಗೆ ಕಾರಣವಾಗಿದ್ದಕ್ಕೆ 5,000 ರೂಪಾಯಿಗಳ "ಪರಿಸರ ಪರಿಹಾರ" (EC) ಠೇವಣಿ ಇಡಲು ಸೇನಾ ಘಟಕಕ್ಕೆ ನಿರ್ದೇಶನ ನೀಡಿದೆ.
ಸೇನೆಯ ಕಂಟೈನರ್‌ನಲ್ಲಿ ಸಂಸ್ಕರಿಸದ ಕೊಳಚೆ ನೀರನ್ನು ಸ್ಟ್ರೀಮ್‌ಗೆ ಬಿಡುವ ವೀಡಿಯೊವನ್ನು ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ.
ಟ್ವಿಟರ್ ವೊಂದಕ್ಕೆ ಪ್ರತಿಕ್ರಿಯಿಸಿದ ಲಡಾಖ್‌ನಲ್ಲಿರುವ ಭಾರತೀಯ ಸೇನಾ ಘಟಕದ ಫೈರ್ ಮತ್ತು ಫ್ಯೂರಿ ಕಾರ್ಪ್ಸ್, “ಫೈರ್ ಅಂಡ್ ಫ್ಯೂರಿ ಕಾರ್ಪ್ಸ್‌ನ ಭಾವನೆಗಳನ್ನು ಪ್ರತಿಬಿಂಬಿಸದ ಈ ಒಂದು ಘಟನೆಗೆ ನಾವು ವಿಷಾದಿಸುತ್ತೇವೆ. ನಾವು ನಗರಾಡಳಿತದೊಂದಿಗೆ ನಿಕಟ ಸಮನ್ವಯದೊಂದಿಗೆ ಕ್ಲೀನ್ ಮತ್ತು ಗ್ರೀನ್ ಲಡಾಖ್‌ಗೆ ಬದ್ಧರಾಗಿರುತ್ತೇವೆ. ಅಗತ್ಯ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ'' ಎಂದಿದೆ.







