ಬಾಲಕನನ್ನು ತಿಂದಿದ್ದ ಮೊಸಳೆಯನ್ನು ನದಿಯಿಂದ ಹೊರಗೆಳೆದು ಥಳಿಸಿ ಕೊಂದ ಕುಟುಂಬಸ್ಥರು: ವೀಡಿಯೊ ವೈರಲ್

ಪಾಟ್ನಾ: ಹೊಸದಾಗಿ ಮೋಟರ್ ಬೈಕ್ ಖರೀದಿಸಿದ ಖುಷಿಯಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿ, ಬೈಕ್‌ಗೆ ಪೂಜೆ ನೆರವೇರಿಸಲು ಗಂಗಾ ಜಲ ತರಲು ಹೋಗಿದ್ದ 14 ವರ್ಷದ ಬಾಲಕನೊಬ್ಬನು ಮೊಸಳೆಗೆ ಆಹಾರವಾಗುವ ಮೂಲಕ ತನ್ನ ಕುಟುಂಬದ ಸದಸ್ಯರನ್ನು ಕಣ್ಣೀರಾಗಿಸಿರುವ ಘಟನೆ ನಡೆದಿದೆ ಎಂದು ndtv.com ವರದಿ ಮಾಡಿದೆ.
ಇದರ ಬೆನ್ನಿಗೇ ಬಾಲಕನನ್ನು ಕಬಳಿಸಿದ ಮೊಸಳೆಯನ್ನು ನದಿಯಿಂದ ಹೊರಗೆಳೆದಿರುವ ಆತನ ಸಂಬಂಧಿಕರು ಹಾಗೂ ಗ್ರಾಮಸ್ಥರು ಅದನ್ನು ದೊಣ್ಣೆಗಳಿಂದ ಥಳಿಸಿ ಹತ್ಯೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಿಹಾರದ ವೈಶಾಲಿ ಜಿಲ್ಲೆಯ ರಘೋಪುರ್ ದಿಯಾರಾ ಗ್ರಾಮದ ಐದನೆಯ ತರಗತಿಯ ವಿದ್ಯಾರ್ಥಿಯಾದ ಅಂಕಿತ್ ಕುಮಾರ್ ಎಂಬ ಬಾಲಕ ಹೊಸ ಬೈಕ್ ಅನ್ನು ಖರೀದಿಸಿದ್ದ ಮತ್ತು ಅದನ್ನು ಗಂಗಾ ನದಿಯ ನೀರಿನಲ್ಲಿ ತೋಯಿಸಿ, ಅದಕ್ಕೆ ಪೂಜೆ ಸಲ್ಲಿಸಲು ಗಂಗಾ ಜಲವನ್ನೂ ತರಲು ಹೋಗಿದ್ದ.
ಆತನ ಕುಟುಂಬದ ಸದಸ್ಯರು ನದಿಯಲ್ಲಿ ಸ್ನಾನ ಮಾಡುವಾಗ ಅಂಕಿತ್ ಮೇಲೆ ದಾಳಿ ಮಾಡಿರುವ ಮೊಸಳೆಯು, ಆತನನ್ನು ನೀರಿನಾಳಕ್ಕೆ ಎಳೆದುಕೊಂಡು ಹೋಗಿ, ಆತನನ್ನು ಜೀವಂತವಾಗಿಯೇ ಭಕ್ಷಿಸಿದೆ.
ಇದಾದ ಒಂದು ಗಂಟೆಯ ನಂತರ ಅಂಕಿತ್ ಕುಟುಂಬದ ಸದಸ್ಯರು ಆತನ ದೇಹದ ಅಳಿದುಳಿದ ಅವಶೇಷವನ್ನು ಗಂಗಾನದಿಯಿಂದ ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ನದಿ ತೀರದಲ್ಲಿ ಜನಜಂಗುಳಿ ನೆರೆದಿದೆ. ಆಗ ಅಂಕಿತ್ ಕುಟುಂಬದ ಸದಸ್ಯರು ಹಾಗೂ ಜನಜಂಗುಳಿಯು ನೀರಿನಿಂದ ಮೊಸಳೆಯನ್ನು ಹೊರಗೆಳೆದು, ಅದು ಸಾಯುವವರೆಗೂ ಅದನ್ನು ದೊಣ್ಣೆ ಹಾಗೂ ಕಬ್ಬಿಣದ ಸಲಾಕೆಗಳಿಂದ ಥಳಿಸಿದ್ದು, ಅದು ಕೊನೆಯುಸಿರೆಳೆದ ನಂತರವೇ ತಮ್ಮ ಥಳಿತವನ್ನು ನಿಲ್ಲಿಸಿರುವುದು ವಿಡಿಯೊವೊಂದರಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಂಕಿತ್‌ನ ಅಜ್ಜ ಸಕಲ್‌ದೀಪ್ ದಾಸ್, "ನಾವು ಹೊಸ ಮೋಟರ್ ಬೈಕ್ ತಂದಿದ್ದೆವು ಮತ್ತು ಗಂಗಾನದಿಯಲ್ಲಿ ಸ್ನಾನ ಮಾಡಿ, ಪೂಜೆಗೆ ಗಂಗಾಜಲ ತರಲು ನದಿಗೆ ತೆರಳಿದ್ದೆವು. ಆದರೆ, ಮೊಸಳೆಯೊಂದು ಆತನನ್ನು ಹಿಡಿದು, ಕೊಂದು ಹಾಕಿತು. ಒಂದು ಗಂಟೆಯ ನಂತರ ನಾವು ಅಂಕಿತ್‌ನ ಮೃತದೇಹದ ಅಳಿದುಳಿದ ಅವಶೇಷಗಳನ್ನು ನೀರಿನಿಂದ ಹೊರ ತಂದೆವು. ನಂತರ ಮೊಸಳೆಯನ್ನೂ ಹೊರಗೆಳೆದು ಹತ್ಯೆಗೈದೆವು" ಎಂದು ತಿಳಿಸಿದ್ದಾರೆ







