ಮೀಸಲಾತಿ ಪ್ರಕಟ; ಕಿನ್ಯ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯೇ ಇಲ್ಲ..!

ಉಳ್ಳಾಲ: ಗ್ರಾಮ ಪಂಚಾಯತ್ ಎರಡನೇ ಹಂತದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ. ಕಿನ್ಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಗೆ ಮೀಸಲಾತಿ ಬಂದಿದ್ದು, ಈ ಸ್ಥಾನಕ್ಕೆ ಕಿನ್ಯ ಪಂಚಾಯತ್ ಸದಸ್ಯ ರಲ್ಲಿ ಅಭ್ಯರ್ಥಿಯೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊಸದಾಗಿ ಮೀಸಲಾತಿಯನ್ನು ಪ್ರಕಟಿಸಬೇಕಾಗಿದೆ.
ಕಿನ್ಯ ಗ್ರಾಮಕ್ಕೆ ಮೊದಲ ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ (ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ) ಮೀಸಲಾತಿ ಪ್ರಕಟವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಪಂಚಾಯತ್ ಸದಸ್ಯರಲ್ಲಿ ಪರಿಶಿಷ್ಟ ಜಾತಿಯಲ್ಲಿ ಪುರುಷರು ಇಲ್ಲದ ಕಾರಣ ಪರಿಶಿಷ್ಟ ಜಾತಿಯ ಮಹಿಳೆಗೆ ಅಧ್ಯಕ್ಷ ಪಟ್ಟ ಲಭಿಸಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟ ಆಗಿದ್ದ ಕಾರಣ ಎರಡೂ ಹುದ್ದೆ ಗಳನ್ನು ಮಹಿಳೆಯರೇ ಪಡಕೊಂಡಿದ್ದರು. ಮೊದಲ ಹಂತದಲ್ಲಿ ಇಬ್ಬರೂ ಮಹಿಳೆಯರು ಅಧಿಕಾರ ಪಡಕೊಂಡ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯರು ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಬರಬಹುದು ಎಂಬ ನಿರೀಕ್ಷೆ ಯಲ್ಲಿದ್ದರು. ಅದೇ ರೀತಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಕೆಲವರು ತಯಾರಾಗಿ ನಿಂತಿದ್ದರು.
ಎರಡನೇ ಹಂತದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ 'ಬಿ' ಮಹಿಳೆಗೆ ಮೀಸಲಾತಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯೇ ಇಲ್ಲದಂತಾಗಿದೆ. ಶೆಟ್ಟಿ ಮತ್ತು ಕ್ರೈಸ್ತ ಮಹಿಳೆಯರು ಕಿನ್ಯ ಪಂಚಾಯತ್ ಸದಸ್ಯರ ಪಟ್ಟಿಯಲ್ಲಿ ಇಲ್ಲದ ಕಾರಣ ಮೀಸಲಾತಿ ಬದಲಾವಣೆಯಾಗಿ ಯಾರಿಗೆ ಬರಬಹುದು ಎಂಬ ಕುತೂಹಲ ಪಂಚಾಯತ್ ಸದಸ್ಯರಲ್ಲಿ ಮನೆ ಮಾಡಿದೆ. ಒಂದು ವೇಳೆ ಸಾಮಾನ್ಯ ಅಥವಾ ಹಿಂದುಳಿದ ವರ್ಗ ಎ ಗೆ ಬಂದರೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆಗುವ ಸಾಧ್ಯತೆ ಕೂಡಾ ಇದೆ.