ಬಿಜೆಪಿಯಿಂದ ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಿರುದ್ಧ ಬಿಜೆಪಿ ಇಲ್ಲಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಚುನಾಯಿತ ಮಾಜಿ ಮತ್ತು ಹಾಲಿ ಸಂಸದರು/ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ಹೇಳಿಕೆಯನ್ನು ದಾಖಲಿಸಲು ಪ್ರಕರಣವನ್ನು ಜುಲೈ 27 ರಂದು ನಿಗದಿಪಡಿಸಿದೆ.
ಈ ಸಂಬಂಧ ಎಲ್ಲ ಪ್ರತಿವಾದಿಗಳಿಗೆ ಮಂಗಳವಾರ ಸಮನ್ಸ್ ಜಾರಿ ಮಾಡಲು ಆದೇಶಿಸಲಾಗಿದೆ.
ಬಿಜೆಪಿಯ ವರ್ಚಸ್ಸಿಗೆ ಕಳಂಕ ತರುವ ಜಾಹೀರಾತುಗಳಲ್ಲಿ ಸುಳ್ಳು ಆರೋಪ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಎಸ್.ಕೇಶವಪ್ರಸಾದ್ ಅವರು ಮೇ 9ರಂದು ಖಾಸಗಿ ದೂರು ದಾಖಲಿಸಿದ್ದರು.
ದೂರಿನ ಪ್ರಕಾರ, 2023 ರ ಮೇ 5 ರಂದು ಪ್ರಮುಖ ಪತ್ರಿಕೆಗಳಲ್ಲಿ ಕೆಪಿಸಿಸಿ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ''ಶೇ. 40 ರಷ್ಟು ಭ್ರಷ್ಟಾಚಾರ''ದಲ್ಲಿ ತೊಡಗಿದೆ ಹಾಗೂ ಹಿಂದಿನ ನಾಲ್ಕು ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ. ಲೂಟಿ ಹೊಡೆದಿದೆ ಎನ್ನುವುದು "ಆಧಾರರಹಿತ, ಪೂರ್ವಾಗ್ರಹ ಪೀಡಿತ ಮತ್ತು ಮಾನನಷ್ಟ" ವಾಗಿದೆ.







