ನೈಜೀರಿಯ: ದೋಣಿ ಮಗುಚಿ 103 ಮಂದಿ ಮೃತ್ಯು

ಅಬುಜಾ: ವಿವಾಹ ಕಾರ್ಯಕ್ರಮದಿಂದ ದೋಣಿಯೊಂದು ಮರಳುವಾಗ ನೀರಿನಲ್ಲಿ ಮಗುಚಿಕೊಂಡು ಮಕ್ಕಳೂ ಸೇರಿದಂತೆ ಕನಿಷ್ಠ 103 ಮಂದಿ ಅತಿಥಿಗಳು ಮೃತಪಟ್ಟಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಕ್ವಾರಾ ರಾಜ್ಯ ರಾಜಧಾನಿ ಇಲೋರಿನ್‌ನಿಂದ 160 ಕಿಮೀ ದೂರ ಇರುವ ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯ ನೈಗರ್ ನದಿಯಲ್ಲಿ ಸೋಮವಾರ ಜನರಿಂದ ಕಿಕ್ಕಿರಿದು ತುಂಬಿದ್ದ ದೋಣಿಯು ಮಗುಚಿಕೊಂಡು ನದಿಯಲ್ಲಿ ಕಾಣೆಯಾಗಿರುವ ಸ್ಥಳೀಯ ನಿವಾಸಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ. ಈವರೆಗೆ ನೂರು ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ವಕ್ತಾರ ಒಕಾಸನ್ಮಿ ಅಜಯಿ ತಿಳಿಸಿದ್ದಾರೆ.
ಸ್ಥಳೀಯ ಗ್ರಾಮದ ಮುಖ್ಯಸ್ಥ ಅಬ್ದುಲ್ ಗಾನಾ ಲುಕ್ಪಾಡಾ ಪ್ರಕಾರ, ನದಿಯಲ್ಲಿ ಮುಳುಗಿರುವ ಬಹುತೇಕರು ವಿವಿಧ ಗ್ರಾಮಗಳಲ್ಲಿನ ಸಂಬಂಧಿಕರಾಗಿದ್ದು, ಒಟ್ಟಾಗಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ರಾತ್ರಿ ವೇಳೆ ಬೇರ್ಪಟ್ಟಿದ್ದರು ಎಂದು ಹೇಳಿದ್ದಾರೆ. ಅವರೆಲ್ಲ ಮೋಟರ್ ಬೈಕ್‌ನಲ್ಲಿ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರಾರಾದರೂ, ಭಾರಿ ಮಳೆ ಸುರಿದು ರಸ್ತೆಯಲ್ಲಿ ಮಳೆ ನೀರು ಪ್ರವಾಹ ಸ್ವರೂಪ ಪಡೆದಿದ್ದರಿಂದ ಅವರೆಲ್ಲ ಸ್ಥಳೀಯವಾಗಿ ನಿರ್ಮಾಣಗೊಂಡಿದ್ದ ದೋಣಿಯಲ್ಲಿ ತೆರಳಿದ್ದರು ಎಂದೂ ಹೇಳಿದ್ದರು.
"ಸುಮಾರು 300 ಮಂದಿಯಿಂದ ಕಿಕ್ಕಿರಿದು ತುಂಬಿದ್ದ ದೋಣಿಯಲ್ಲಿ ತೆರಳುವಾಗ ನದಿಯಲ್ಲಿ ದೋಣಿಗೆ ದೊಡ್ಡ ದಿಮ್ಮಿಯೊಂದು ಬಡಿದು ಅದು ಇಬ್ಭಾಗವಾಯಿತು" ಎಂದು ಲುಕ್ಪಾಡಾ ತಿಳಿಸಿದ್ದಾರೆ.
ನೈಗರ್ ರಾಜ್ಯದ ನೆರೆ ಗ್ರಾಮವಾದ ಎಗ್ಬೋಟಿಯಲ್ಲಿ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಪಘಾತವು ಮಧ್ಯರಾತ್ರಿ ಮೂರು ಗಂಟೆಗೆ ಸಂಭವಿಸಿದ್ದರಿಂದ ಅನೇಕ ಮಂದಿಗೆ ತಡವಾಗಿ ಅಪಘಾತದ ಬಗ್ಗೆ ತಿಳಿಯುವಂತಾಯಿತು" ಎಂದು ಸ್ಥಳೀಯ ನಿವಾಸಿಯಾದ ಉಸ್ಮಾನ್ ಇಬ್ರಾಹಿಂ ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರು ಮೊದಲಿಗೆ 50 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆ ಆರಂಭದಲ್ಲಿನ ಪ್ರಯತ್ನವು ನಿಧಾನ ಹಾಗೂ ತೀರಾ ಕ್ಲಿಷ್ಟಕರವಾಗಿತ್ತು ಎಂದು ಲುಕ್ಪಾಡಾ ಹೇಳಿದ್ದಾರೆ.
ಈ ಅಪಘಾತವು ನೈಜೀರಿಯಾ ಇತಿಹಾಸದಲ್ಲೇ ದೊಡ್ಡ ದೋಣಿ ದುರಂತವಾಗಿದ್ದು, ಮಂಗಳವಾರ ಮಧ್ಯಾಹ್ನದವರೆಗೂ ಅಧಿಕಾರಿಗಳು ಹಾಗೂ ಸ್ಥಳೀಯರು ನದಿಯಲ್ಲಿ ಮೃತದೇಹಗಳ ಶೋಧ ಕಾರ್ಯ ಮುಂದುವರಿಸಿದ್ದರು. ಬುಧವಾರ ರಾತ್ರಿಯವರೆಗೂ ರಕ್ಷಣಾ ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸ್ ವಕ್ತಾರ ಅಜಯಿ ತಿಳಿಸಿದ್ದಾರೆ.
ಹಲವಾರು ವರ್ಷಗಳ ನಂತರ ನಡೆದಿರುವ ಭೀಕರ ದೋಣಿ ದುರಂತವಿದು ಎಂದು ಸ್ಥಳೀಯರು ಹೇಳಿದ್ದಾರೆ.