ಹಲವು ವಿಚಾರಗಳಲ್ಲಿ ಸಹಮತವಿಲ್ಲದಿದ್ದರೂ ಭಾರತದ ಕುರಿತು ಒಂದೇ ನಿಲುವು ಹೊಂದಿರುವ ಜಾಕ್ ಡೋರ್ಸಿ, ಎಲಾನ್ ಮಸ್ಕ್

ಹೊಸದಿಲ್ಲಿ: ಟ್ವಿಟ್ಟರ್‌ನ ಹಾಲಿ ಮಾಲಕ ಇಲಾನ್ ಮಸ್ಕ್ ಮತ್ತು ಸಂಸ್ಥೆಯ ಮಾಜಿ ಸಿಇಒ ಜ್ಯಾಕ್ ಡೋರ್ಸೆ ಅವರು ಪರಸ್ಪರ ವೈರುದ್ಧ್ಯದ ಅಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಭಾರತ ಮತ್ತು ಟ್ವಿಟ್ಟರ್ ಕುರಿತಂತೆ ಅವರ ಅಭಿಪ್ರಾಯಗಳು ಬಹುತೇಕ ಒಂದೇ ರೀತಿಯಾಗಿದೆ. ಭಾರತದಲ್ಲಿ ಕಾರ್ಯಾಚರಿಸುವುದು ಸವಾಲಿನ ಕೆಲಸ ಹಾಗೂ ಇಲ್ಲಿ ಸರ್ಕಾರದ ಐಟಿ ನಿಯಮಗಳಿಗೆ ಬಧ್ಧರಾಗಬೇಕು ಇಲ್ಲದೇ ಹೋದಲ್ಲಿ ಪರಿಣಾಮ ಎದುರಿಸಬೇಕೆಂಬ ಕುರಿತು ಇಬ್ಬರು ನಿಲುವು ಒದೇ ರೀತಿ ಆಗಿದೆ ಎಂದು ವರದಿಗಳು ತಿಳಿಸಿವೆ.
ತಾವು ಟ್ವಿಟ್ಟರ್ ಸಿಇಒ ಆಗಿದ್ದ ವೇಳೆ ಖಾತೆಗಳನ್ನು ಬ್ಲಾಕ್ ಮಾಡಲು ಅಥವಾ ಕಂಟೆಂಟ್ ಡಿಲೀಟ್ ಮಾಡಲು ಭಾರತದ ಸರ್ಕಾರದಿಂದ ಹಲವು ಮನವಿಗಳು ಬಂದಿದ್ದವು ಎಂದು ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಡೋರ್ಸೆ ಹೇಳಿದ್ದರು. ಬೇಡಿಕೆಗಳಿಗೆ ಸ್ಪಂದಿಸದೇ ಇದ್ದರೆ ಸರ್ಕಾರ ಟ್ವಿಟ್ಟರ್‌ನ ಭಾರತೀಯ ಉದ್ಯೋಗಿಗಳಿಗೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
ಡೋರ್ಸೆ ಅವರ ಈ ಹೇಳಿಕೆ ಮತ್ತು ಟ್ವಿಟ್ಟರ್‌ನ ಹಾಲಿ ಮುಖ್ಯಸ್ಥ ಎಲಾನ್ ಮಸ್ಕ್ ಕೆಲ ವಾರಗಳ ಹಿಂದೆ ನೀಡಿದ ಹೇಳಿಕೆಗೂ ಸಾಮ್ಯತೆ ಇದೆ. ಪ್ರಧಾನಿ ಮೋದಿ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಹಾಗೂ ಅದನ್ನು ಭಾರತದಲ್ಲಿ ನಿರ್ಬಂಧಿಸುವಲ್ಲಿ ಟ್ವಿಟ್ಟರ್ ಪಾತ್ರದ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ್ದ ಮಸ್ಕ್, ಬಿಬಿಸಿ ಸಾಕ್ಷ್ಯಚಿತ್ರದ ಮಹತ್ವವನ್ನು ಗೌಣವಾಗಿಸಿತ್ತೇ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದರು.
ಮುಂದುವರಿದು ಮಾತನಾಡಿದ್ದ ಅವರು “ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಿಗಾಗಿ ಇರುವ ನಿಯಮಗಳು ಸಾಕಷ್ಟು ಕಠಿಣವಾಗಿವೆ ಮತ್ತು ಒಂದು ದೇಶದ ಕಾನೂನುಗಳ ವಿರುದ್ಧ ನಾವು ಹೋಗುವಂತಿಲ್ಲ. ನಮ್ಮ ಜನರು ಜೈಲಿಗೆ ಹೋಗಬೇಕೇ ಅಥಾ ಕಾನೂನುಗಳನ್ನು ಪಾಲಿಸಬೇಕೇ ಎಂಬ ಎರಡು ಆಯ್ಕೆಗಳು ನಮ್ಮ ಮುಂದಿದ್ದರೆ ನಾವು ಕಾನೂನು ಪಾಲಿಸುತ್ತೇವೆ,” ಎಂದಿದ್ದರು.
ಮಸ್ಕ್ ಅವರು ಭಾರತದ ಐಟಿ ನಿಯಮಗಳನ್ನು ಉಲ್ಲೇಖಿಸಿದ್ದರೆ ಡೋರ್ಸೆ ಅವರು ರೈತ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ನೀಡಿದ್ದರು.
ಮಸ್ಕ್ ಅವರ ಹೇಳಿಕೆಗೆ ಭಾರತ ಸರ್ಕಾರ ಸ್ಪಂದಿಸಿರದೇ ಇದ್ದರೂ ಡೋರ್ಸೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಐಟಿ ಸಚಿವ ರಾಜೀವ್ ಚಂದ್ರಶೇಖರ್, ಅವುಗಳನ್ನು ಅಪ್ಪಟ ಸುಳ್ಳು ಎಂದಿದ್ದಾರೆ. “ಯಾರೂ ಜೈಲಿಗೆ ಹೋಗಿಲ್ಲ, ಟ್ವಿಟ್ಟರ್ ಅನ್ನೂ ಮುಚ್ಚಲಾಗಿರಲಿಲ್ಲ,” ಎಂದು ಸರಣಿ ಟ್ವೀಟ್‌ಗಳಲ್ಲಿ ಸಚಿವರು ಹೇಳಿದ್ದಾರೆ.