ಸಾವಿಗೀಡಾಗಿದ್ದಾನೆ ಎಂದುಕೊಂಡ ವ್ಯಕ್ತಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಪತ್ತೆ !

ಹೊಸ ದಿಲ್ಲಿ: ಅಕ್ಷರಶಃ ಬಾಲಿವುಡ್ ಸಿನಿಮಾದಂಥ ಸನ್ನಿವೇಶವೊಂದರಲ್ಲಿ ಬಿಹಾರದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದ ತನ್ನ ಭಾವನನ್ನು ನೊಯ್ಡಾದ ಸೆಕ್ಟರ್ 50ರ ಬಳಿಯಿರುವ ಮೊಮೊ ಅಂಗಡಿ ಬಳಿ ಕೊಳಕಾದ ಬಟ್ಟೆ ತೊಟ್ಟು, ಉದ್ದನೆಯ ಗಡ್ಡ ಬಿಟ್ಟುಕೊಂಡ ಸ್ಥಿತಿಯಲ್ಲಿ ಪತ್ತೆ ಹಚ್ಚಿದ್ದಾನೆ ಎಂದು news18.com ವರದಿ ಮಾಡಿದೆ.
ಭಿಕ್ಷುಕನಂತಿದ್ದ ವ್ಯಕ್ತಿಯೊಬ್ಬನನ್ನು ಅಂಗಡಿ ಮಾಲಕ ಬೈಯ್ಯುತ್ತಿರುವುದನ್ನು ಆತ ಗಮನಿಸಿದ್ದಾನೆ. ಕೂಡಲೇ ಭಿಕ್ಷುಕನ ನೆರವಿಗೆ ಧಾವಿಸಿರುವ ಆತನಿಗೆ ಆ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ಭಾವಿಸಲಾಗಿದ್ದ ತನ್ನ ಭಾವನೇ ಎಂಬ ಸಂಗತಿ ತಿಳಿದುಬಂದಿದೆ.
ಉದ್ದನೆಯ ಗಡ್ಡ ಬಿಟ್ಟುಕೊಂಡಿದ್ದ ವ್ಯಕ್ತಿಯನ್ನು ಭಗಲ್‌ಪುರ ನಿವಾಸಿ ನಿಶಾಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಜನವರಿ 31, 2023ರಂದು ನಾಪತ್ತೆಯಾಗಿದ್ದ. ಈ ಸಂಬಂಧ ಸುಲ್ತಾನ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಆತನ ತಂದೆ ಸಚ್ಚಿದಾನಂದ್ ಸಿಂಗ್, ತನ್ನ ಪುತ್ರನನ್ನು ಭಾವ ರವಿಶಂಕರ್ ಸಿಂಗ್ ಹಾಗೂ ಮಾವ ನವೀನ್ ಸಿಂಗ್ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.





