ಬಲಪಂಥೀಯ ಸುದರ್ಶನ್ ಟಿವಿಯ ಸುರೇಶ್ ಚಾವ್ಹಂಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯುಎಇ ರಾಜಕುಮಾರಿ
"ಇನ್ನೊಬ್ಬರನ್ನು ಹೇಗೆ ಗೌರವಿಸಬೇಕೆಂಬುವುದನ್ನು ತಿಳಿದುಕೊಳ್ಳಿ"

ದುಬೈ: ಯುಎಇ ರಾಜಕುಟುಂಬದ ರಾಜಕುಮಾರಿ ಶೇಖಾ ಹಿಂದ್ ಬಿಂತ್ ಫೈಸಲ್ ಅಲ್ ಖಾಸಿಮಿ ಅವರು ಜಾತ್ಯತೀತೆಯ ಬಗ್ಗೆ ಸುದರ್ಶನ ಟಿವಿಯ ಮುಖ್ಯ ಸಂಪಾದಕ ಸುರೇಶ್ ಚಾವ್ಹಂಕೆ ಅವರು ಮಾಡಿರುವ ಟ್ವೀಟ್ ಒಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಂ ಚಾಲಕನೊಬ್ಬ ಹವಾನಿಯಂತ್ರಿತ ಬಸ್ಸಿನೊಳಗಡೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಪ್ರಯಾಣಿಕರು ಹೊರಗೆ ಬಿಸಿಲಿನಲ್ಲಿ ಬವಣೆ ಪಡುವಂತಾಗಿದೆ ಎಂದು ಚಾವ್ಹಂಕೆ ಆರೋಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜಕುಮಾರಿ ಈ ಘಟನೆ ಕುರಿತು ಸ್ಪಷ್ಟೀಕರಣ ನೀಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮಾಡಿದ ಟ್ವೀಟ್ ಅನ್ನು ಶೇರ್ ಮಾಡಿದ್ದಾರೆ.
ಈ ಸಂದರ್ಭ ಬಸ್ ಕಾರ್ಯಾಚರಿಸುತ್ತಿರಲಿಲ್ಲ ಹಾಗೂ ಟ್ರಿಪ್ ಆರಂಭ ಸಮಯಕ್ಕಿಂತ ಮೊದಲು ಅಥವಾ ನಂತರ ಯಾರಿಗೂ ಬಸ್ ಪ್ರವೇಶಿಸಲು ಸುರಕ್ಷತೆಯ ಕಾರಣಗಳಿಗಾಗಿ ಅನುಮತಿಸಲಾಗುವುದಿಲ್ಲ ಎಂದು ಆರ್‌ಟಿಎ ಸ್ಪಷ್ಟೀಕರಣ ನೀಡಿದ್ದನ್ನು ರಾಜಕುಮಾರಿ ಶೇರ್ ಮಾಡಿದ್ದರು.
ಯುಎಇ ಒಂದು ಜಾತ್ಯತೀತ ರಾಷ್ಟ್ರವಲ್ಲ ಎಂದು ಚಾವ್ಹಂಕೆ ಟೀಕಿಸಿರುವುದನ್ನೂ ಖಂಡಿಸಿರುವ ರಾಜಕುಮಾರಿ ಅವರು ನಿಖರ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಬಸ್ ಚಾಲಕನನ್ನು ಬೆಂಬಲಿಸಿದ ರಾಜಕುಮಾರಿ, ಚಾಲಕ ಧಾರ್ಮಿಕ ಸಹಿಷ್ಣುತೆ ಇರುವ ಮುಸ್ಲಿಂ ರಾಷ್ಟ್ರದಲ್ಲಿ ಕೆಲಸದ ಅವಧಿ ನಂತರ ಪ್ರಾರ್ಥನೆ ಸಲ್ಲಿಸುತ್ತಿದ್ದಾನೆ ಎಂದು ಹೇಳಿದರು. ಮೇಲಾಗಿ ಚಾಲಕ ಯಾರಿಗೂ ಹಾನಿಯುಂಟು ಮಾಡುವ ಕೃತ್ಯದಲ್ಲಿ ತೊಡಗಿಲ್ಲ ಎಂದೂ ಹೇಳಿದರಲ್ಲದೆ ಇತರರನ್ನು ಹೇಗೆ ಗೌರವಿಸಬೇಕೆಂದು ಚಾವ್ಹಂಕೆ ಕಲಿಯಬೇಕೆಂದು ಸಲಹೆಯನ್ನೂ ನೀಡಿದ್ದಾರೆ.
मुस्लिम ड्राइवर A/C बस में नमाज़ पढ़ रहा है
— Suresh Chavhanke “Sudarshan News” (@SureshChavhanke) June 13, 2023
इस लिए पैसेंजर बाहर धुप में खड़े हैं। #Jago #Secularism pic.twitter.com/tcEYUkLAaA