ಜೂನ್ 15ರಿಂದ ಯುರೂಪ್‌ನಲ್ಲಿ ಯಕ್ಷಗಾನ ಅಭಿಯಾನ

ಮಂಗಳೂರು, ಜೂ.14: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಜೂನ್ 15ರಿಂದ ಯುರೋಪ್‌ನ ವಿವಿಧ ದೇಶಗಳಲ್ಲಿ ಯಕ್ಷಗಾನ ಅಭಿಯಾನ ನಡೆಯಲಿದೆ ಎಂದು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯುನೈಟೆಡ್ ಕಿಂಗ್‌ಡಮ್‌ನ ಲಂಡನ್, ಮಿಡ್‌ಲ್ಯಾಂಡ್ಸ್, ಡರ್ಹಾಮ್, ಲೀಡ್ಸ್, ಎಡಿನ್‌ಬರ್ಗ್, ಸ್ಕಾಟ್ಲೆಂಡ್ ಮೊದಲಾದ ದೇಶಗಳಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಯಕ್ಷಗಾನ ಅಭಿಯಾನದಲ್ಲಿ ರಾಜವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದೆ. ಆಗಸ್ಟ್ ತಿಂಗಳಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್‌ಫರ್ಟ್, ಮುನಿಚ್, ಜರ್ಮನಿ, ಡರ್ಹಾಮ್ ಮೊದಲಾದ ಕಡೆ ಯಕ್ಷಗಾನ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಸತೀಶ್ ಶೆಟ್ಟಿ ವಿವರಿಸಿದರು.
ಪಣಂಬೂರು ವಾಸು ಐತಾಳ್ ಯುಎಸ್‌ಎ ಇವರ ನೇತೃತ್ವದಲ್ಲಿ ನಡೆಯುವ ಯಕ್ಷಗಾನ ಅಭಿಯಾನದಲ್ಲಿ ಪಟ್ಲ ಸತೀಶ್ ಶೆಟ್ಟಿ, ಪ್ರೊ. ಎಂ.ಎಲ್.ಸಾಮಗ, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ, ಪದ್ಯಾಣ ಚಂದ್ರಶೇಖರ ಪೂಜಾರಿ, ಧರ್ಮಸ್ಥಳ ಮಹೇಶ್ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ್ ಪೂಜಾರಿ ಬೆಳ್ಳಿಪ್ಪಾಡಿ ಮತ್ತಿತರ ಕಲಾವಿದರು ಭಾಗವಹಿಸಲಿದ್ದಾರೆ.
ಪ್ರತಿಷ್ಠಿತ ಕನ್ನಡಿಗರು ಯುಕೆ ಸಂಸ್ಥೆಯ ಆಹ್ವಾನ ಹಾಗೂ ದೇವಿಕಾ ಡ್ಯಾನ್ಸ್ ಥಿಯೇಟರ್ ಇವರ ಆಶ್ರಯದಲ್ಲಿ ಯುರೋಪ್ ಯಕ್ಷಗಾನ ಅಭಿಯಾನ ಸಂಪನ್ನಗೊಳ್ಳಲಿದೆ. ಅಲ್ಲದೆ ಡರ್ಹಾಮ್ ಮತ್ತು ಲೀಡ್ಸ್ ಮಹಾ ವಿದ್ಯಾಲಯ ಗಳಲ್ಲಿ ಯಕ್ಷಗಾನದ ಶಿಬಿರಗಳು ನಡೆಯಲಿವೆ ಎಂದು ಸತೀಶ್ ಶೆಟ್ಟಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಣಂಬೂರು ವಾಸು ಐತಾಳ್, ಪ್ರೊ. ಎಂ.ಎಲ್.ಸಾಮಗ, ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್,ಸಿಎ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು.