ಬಂಟ್ವಾಳ: ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

ಬಂಟ್ವಾಳ: ಮಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ಬಿಸಿರೋಡಿನ ತಾಲೂಕು ಆಡಳಿತ ಸೌಧದ ಕಚೇರಿ ಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಲೋಕಾಯುಕ್ತ ಎಸ್.ಪಿ.ಸೈಮಂಡ್ಸ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ತಾಲೂಕಿನ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 19 ದೂರು ಅರ್ಜಿಗಳು ಬಂದಿದ್ದು, ಅದರಲ್ಲಿ ಹೆಚ್ಚಿನ ಪ್ರಕರಣಗಳು ಕಂದಾಯ ಇಲಾಖೆಗೆ ಒಳಪಟ್ಟಿತ್ತು. ದೂರುದಾರರ ಎಲ್ಲಾ ಅರ್ಜಿಯನ್ನು ಹಾಗೂ ಅವರ ಅಹವಾಲು ಗಳನ್ನು ಎಸ್.ಪಿ.ಸೈಮಂಡ್ಸ್ ಅವರು ಪರಿಶೀಲನೆ ನಡೆಸಿದರು.
ಕೆಲವೊಂದು ಪ್ರಕರಣಗಳು ನ್ಯಾಯಾಲಯದಲ್ಲಿ ಇದ್ದ ಕಾರಣ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಅವರಿಗೆ ಸೂಕ್ತ ಸಲಹೆ ನೀಡಿದರು. ಸಣ್ಣಪುಟ್ಟ ಸಮಸ್ಯೆಯನ್ನು ಕಾನೂನುಬದ್ಧವಾಗಿ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಟ್ಟು 19 ದೂರು ಅರ್ಜಿಗಳ ಪೈಕಿ 17 ದೂರು ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣವಾದರೆ ಉಳಿದ 2 ಪ್ರಕರಣಗಳು ಪುರಸಭಾ ಇಲಾಖೆಗೆ ಒಳಪಡುವ ಪ್ರಕರಣಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ವಿಟ್ಲ ಸಮೀಪದ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಯಂತಿ ಆರ್.ರೈ ಅವರಿಗೆ ಮಂಜೂರುಗೊಂಡ 94 ಸಿ.ಹಕ್ಕು ಪತ್ರವನ್ನು ನೀಡದೆ ಕಂದಾಯ ಇಲಾಖೆ ಮರುತನಿಖೆಯ ಅದೇಶ ನೀಡಿ ಅನ್ಯಾಯವೆಸಗಿದೆ. ಅರ್ಜಿ ನೀಡಿ ಹಲವು ಸಮಯವಾದರೂ 94 ಸಿ. ಹಕ್ಕುಪತ್ರ ಸಿಕ್ಕಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗೆ ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಇದು ಭ್ರಷ್ಟಾಚಾರದ ಅರೋಪ ಅಲ್ಲ,ಈ ಅರ್ಜಿಯಲ್ಲಿ ಕರ್ತವ್ಯ ಲೋಪ ಆಗಿದೆ ಹಾಗಾಗಿ ಸ್ಥಳದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ತಹಶಿಲ್ದಾರ್ ಗೆ ಸೂಚಿಸಿದರು.
ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯ ಶಹಾಬ್ ಎಂಬಾತನ ಭೂದಾಖಲೆ 1ರಿಂದ 5 ಪ್ಲಾಟಿಂಗ್ ಕಡತಗಳಿಗೆ ಸಂಬಂಧಿಸಿದಂತೆ ಸರಿಪಡಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವ ಬಗ್ಗೆ ದೂರು ನೀಡಿದರು.
ಸರಪಾಡಿ ಗ್ರಾಮದ ರಾಮಣ್ಣ ಅವರ ಕೃಷಿ ಭೂಮಿಗೆ ಎ.ಎಂ.ಆರ್ ಡ್ಯಾಂ ನಿಂದಾಗಿ ಹಾನಿಯಾಗುತ್ತಿದ್ದು, ಸಮಸ್ಯೆ ಪರಿಹಾರ ಮಾಡುವ ಉದ್ದೇಶದಿಂದ ಕೃಷಿ ಭೂಮಿಗೆ ಅಡ್ಡಲಾಗಿ ತಡೆಗೋಡೆ ಅಥವಾ ಪರಿಹಾರದ ರೂಪವಾಗಿ ಹಣವನ್ನು ನೀಡುವಂತೆ ಲೋಕಾಯುಕ್ತಕ್ಕೆ ಅರ್ಜಿ ನೀಡಿದ್ದರು. ಆದರೆ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದರಿಂದ ನ್ಯಾಯಾಲಯದ ತೀರ್ಮಾನವನ್ನು ಕಾಯಬೇಕಾಗಿದೆ ಎಂದು ಎಸ್.ಪಿ.ತಿಳಿಸಿದರು. ಆದರೆ ದೂರುದಾರರ ಬೇಡಿಕೆಯನ್ನು ಪೂರೈಸುವ ಮನಸ್ಸು ಕಂಪೆನಿ ಮಾಡಿದರೆ ನೀವು ನ್ಯಾಯಾಲಯದಲ್ಲಿರುವ ಕೇಸ್ ವಾಪಾಸು ಪಡೆದು ಕೊಳ್ಳಬೇಕಾಗಬಹುದು ಎಂದು ಎಸ್.ಪಿ.ಸಲಹೆ ನೀಡಿದಾಗ ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಪ್ರಕರಣವನ್ನು ಮುಗಿಸುವ ಹುಮ್ಮಸ್ಸು ಇದ್ದರೆ ಮಾತುಕತೆ ಮೂಲಕ ಬಗೆಹರಿಸಿ ಎಂದು ಕಂಪೆನಿಯವರಿಗೆ ತಿಳಿಸಿದರು.
ಬಿ.ಮೂಡ ಗ್ರಾಮದ ವಿ.ದಿವಾಕರ ಅವರ ಪಹಣಿಪತ್ರದ ದೋಷವನ್ನು ಸರಿಪಡಿಸಲು ನೀಡಿದ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಯಿತು. ಕರೋಪಾಡಿ ಗ್ರಾಮದ ಕುತ್ತಪಡ್ಪು ನಿವಾಸಿ ವಿಕ್ಟರ್ ವೇಗಸ್ ಅಕ್ರಮ ಸಕ್ರಮ ಮೂಲ ಕಡತ ನಾಪತ್ತೆಯಾಗಿದೆ ಕಂದಾಯ ಇಲಾಖೆ ಹಿಂಬರಹ ನೀಡಿದೆ ಎಂದು ದೂರು ನೀಡಿದ ಅವರು ಮೂಲ ದಾಖಲೆಗಳನ್ನು ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಈ ಬಗ್ಗೆ ಎಸ್.ಪಿ.ಅವರಿಗೆ ಮಾಹಿತಿ ನೀಡಿದ ತಹಶಿಲ್ದಾರ್ ಈಗಾಗಲೇ ಮೂಲದಾಖಲೆಗಳ ಒದಗಿಸುವ ನಿಟ್ಟಿನಲ್ಲಿ ಅಗತ್ಯ ದಾಖಲೆಗಳ ಜೊತೆ ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಮಾಡಲಾಗಿದೆ ಎಂದು ಅವರು ತಿಳಿಸಿದರು. ಪೆರ್ನೆ ನಿವಾಸಿ ಜಯಲಕ್ಷ್ಮಿ ಎಂಬವರ ಭೂ ದಾಖಲೆಗೆ ಸಂಬಂಧಿಸಿದಂತೆ ನೀಡಿದ ದೂರಿನ ಅಹವಾಲು ಸ್ವೀಕರಿಸಿದರು.
ಬಿಸಿರೋಡು – ಪುಂಜಾಲಕಟ್ಟೆ ರಸ್ತೆ ಅಭಿವೃದ್ದಿ ಸಂದರ್ಭ ಚೆಂಡ್ತಿಮಾರ್ ನಿವಾಸಿ ಆನಂದ ಪೂಜಾರಿ ಸಹಿತ ಬಂಟ್ವಾಳ ಕಸ್ಬಾ ಗ್ರಾಮದ ಚೆಂಡ್ತಿಮಾರ್ ಅನೇಕ ನಿವಾಸಿಗಳ ಲಕ್ಷಾಂತರ ರೂ ಬೆಲೆಬಾಳುವ ಕೃಷಿ ಹಾಗೂ ವಾಣಿಜ್ಯ ಭೂಮಿ ಕಳೆದುಕೊಂಡಿದ್ದರು. ಆದರೆ ರಸ್ತೆ ಕಾಮಗಾರಿ ನಡೆದ ಮೂರು ವರ್ಷ ಕಳೆದರೂ ಸರಕಾರ ಕೃಷಿಕರ ಭೂಮಿಗೆ ಪರಿಹಾರ ರೂಪವಾಗಿ ಹಣ ನೀಡಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗೆ ದೂರು ನೀಡಿದರು.
ಇದೇ ಮಾದರಿಯ ದೂರು ಈ ಹಿಂದೆ ಲೋಕಾಯುಕ್ತ ಅಧಿಕಾರಿಗಳ ಬಳಿಗೆ ಬಂದ ಸಂದರ್ಭದಲ್ಲಿ ಭೂಸ್ವಾಧೀನ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಹಾರವನ್ನು ತೆಗೆಸಿಕೊಡುವ ಕೆಲಸ ಮಾಡಿದ್ದರು. ಹಾಗಾಗಿ ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ.ಅವರು ಭೂಮಿ ಕಳೆದುಕೊಂಡ ಎಲ್ಲಾ ಭೂಮಾಲಕರು ಪ್ರತ್ಯೇಕ ದೂರು ತಹಶಿಲ್ದಾರ್ ಹಾಗೂ ಲೋಕಾಯುಕ್ತ ಇಲಾಖೆಗೆ ನೀಡಿ . ನಾವು ಇನ್ನೊಂದು ದಿನ ನಿಗದಿ ಮಾಡಿ ಭೂಸ್ವಾಧೀನ ಅಧಿಕಾರಿಗಳನ್ನು ಇಲ್ಲಿಗೆ ಕರೆಸಿ ಭೂ ಪರಿಹಾರವನ್ನು ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಲ್ಲಿ ನದಿ ತೀರದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕವನ್ನು ರೈತರಿಗೆ ಯಾವುದೇ ಮಾಹಿತಿ ನೀಡದೆ ಕಡಿತಗೊಳಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಏಕಪಕ್ಷೀಯವಾದ ನಿರ್ಧಾರದ ಪರಿಣಾಮವಾಗಿ ನೇತ್ರಾವತಿ ನದಿ ತೀರದ ಕೃಷಿಕರು ತೊಂದರೆ ಅನುಭವಿಸಿದ್ದಾರೆ. ಇದರ ಜೊತೆ ಸಾವಿರಾರು ರೂ. ಖರ್ಚ ಮಾಡಿದ ಪಂಪ್ ಸೆಟ್ ಗಳಿಗೆ ಅಳವಡಿಸಲಾಗಿದ್ದ ನೀರಿನ ಪೈಪ್ ಗಳನ್ನು ತುಂಡು ಮಾಡಿ ಕೊಂಡಹೋಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ನದಿ ನೀರನ್ನು ನಂಬಿ ಬದುಕು ನಡೆಸುವ ಕೃಷಿಕರು ಏನು ಮಾಡಬೇಕೆಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳ ಅದೇಶವನ್ನು ನಾವು ಪಾಲಿಸಿದ್ದೇವೆ ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ತುಂಬೆಯಲ್ಲಿ ನೂತನವಾಗಿ ಏಳು ಮೀಟರ್ ಎತ್ತರದ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ನೇತ್ರಾವತಿ ನದಿ ತೀರದ ಮುಳುಗಡೆಯಾಗುವ ಕೃಷಿ ಭೂಮಿಗೆ ಸರಕಾರ ಸರಿಯಾದ ಪರಿಹಾರ ನೀಡಿಲ್ಲ. ಮತ್ತು ಈವರೆಗೆ ಕೃಷಿಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಮ್ಮುಖದಲ್ಲಿ ಸರ್ವೇ ಕಾರ್ಯ ನಡೆಸಿಲ್ಲ ಎಂದು ಆರೋಪ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಜೊತೆಯಾಗಿ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದರು.
ಸಜೀಪಮುನ್ನೂರು ಗ್ರಾಮದಲ್ಲಿ ಸ್ಮಶಾನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅವರು ಭೂಮಿ ಮಂಜೂರು ಮಾಡಿದ್ದಾರೆ, ಆದರೆ ಸಂಬಂಧಿಸಿದ ಇಲಾಖೆ ಜಿಲ್ಲಾಧಿಕಾರಿ ಅದೇಶಕ್ಕೂ ಬೆಲೆ ನೀಡದೆ ಸ್ಮಶಾನ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರೋಪ ಮಾಡಿದರು. ಸ್ಮಶಾನಕ್ಕೆ ಮಂಜೂರಾದ ಸರಕಾರಿ ಜಮೀನಿನು ಖಾಸಗಿ ವ್ಯಕ್ತಿಯೋರ್ವ ಒತ್ತುವರಿ ಮಾಡಿದ್ದಾನೆ, ಶೀಘ್ರವಾಗಿ ಒತ್ತುವರಿಯಾಗಿರುವ ಸ್ಮಶಾನದ ಜಮೀನಿನ ತೆರವು ಕಾರ್ಯ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು. ದೂರಿಗೆ ಸ್ಪಂದಿಸಿದ ಎಸ್.ಪಿ.ಅವರು ಒತ್ತುವರಿ ಜಮೀನಿನ ತೆರವು ಕಾರ್ಯವನ್ನು ಮಾಡುವಂತೆ ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿ.ವೈ.ಎಸ್.ಪಿ.ಗಳಾದ ಚೆಲುವರಾಜ್, ಕಲಾವತಿ, ಇನ್ಸ್ ಪೆಕ್ಟರ್ ಅಮಾನುಲ್ಲಾ ಖಾನ್, ಹೆಚ್.ಸಿ.ಮಹೇಶ್, ಪಿ ಸಿ.ಗಳಾದ ವಿವೇಕ್, ಸಣ್ಣಪಂಪಣ್ಣ, ಬಂಟ್ವಾಳ ತಹಶಿಲ್ದಾರ್ ಬಿ.ಎಸ್.ಕೂಡಲಗಿ, ಪಿ.ಡಬ್ಯೂ.ಡಿ ಸಹಾಯಕ ಇಂಜಿನಿಯರ್ ತಾರನಾಥ, ತಾ.ಪಂ.ಇ.ಒ.ರಾಜಣ್ಣ, ಎಡಿಎಲ್ ಅರ್ ಮಧು, ಜಿ.ಪಂ. ಇಂಜಿನಿಯರ್ ಜೈಪ್ರಕಾಶ್, ಕೆ.ಎಸ್.ಆರ್.ಟಿ.ಸಿ. ಬಿ.ಸಿ.ರೋಡು ಘಟಕದ ವಿಭಾಗ ನಿಯಂತ್ರಣ ಅಧಿಕಾರಿ ಶ್ರೀಶ ಭಟ್, ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ.ಸೋಜ, ಕೃಷಿ ಸಹಾಯಕ ಅಧಿಕಾರಿ ನಂದನ್ ಶೆಣೈ, ವಿಟ್ಲ ಪಂ.ಪಂಚಾಯತ್ ಮುಖ್ಯಾಧಿಕಾರಿ ಗೋಪಾಲನಾಯ್ಕ್ ಆರೋಗ್ಯಾಧಿಕಾರಿ ಮಂಜುನಾಥ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಶಿಕ್ಷಣ ಇಲಾಖೆಯ ಸಂಯೋಜಕಿ ಪ್ರತಿಮಾ, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಅವಿನಾಶ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದಿಯಾ, ಮೆಸ್ಕಾಂ ಇಲಾಖೆಯ ಇಂಜಿನಿಯರ್ ಪ್ರಶಾಂತ್ ಪೈ, ಎ.ಪಿ.ಎಂ.ಸಿ.ಇಲಾಖೆ ಅಧಿಕಾರಿ ಶಮಂತ್, ಬಂಟ್ವಾಳ ಸಿ.ಡಿ.ಪಿ.ಒ ಶೀಲಾವತಿ, ವಿಟ್ಲ ಸಿ.ಡಿ.ಪಿ.ಒ ಉಷಾ ಡಿ. ಕಾರ್ಮಿಕ ಇಲಾಖೆ ಅಧಿಕಾರಿ ಮರ್ಲಿನ್ ಗ್ರೇಸಿಯಾ ಡಿಸೋಜ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಸುನೀತಾ, ಉಪ ತಹಶೀಲ್ದಾರುಗಳಾದ ರಾಜೇಶ್, ದಿವಾಕರ್, ಕಂದಾಯ ನಿರೀಕ್ಷರುಗಳಾದ ಜನಾರ್ದನ, ವಿಜಯ್, ಪ್ರಶಾಂತ್ ಉಪಸ್ಥಿತರಿದ್ದರು.