ರೆಡ್‌ಕ್ರಾಸ್‌ನ ಸಂಸ್ಥೆಯ ಸಮಾಜಮುಖಿ ಸೇವೆಗಳು ಶ್ಲಾಘನೀಯ: ಶಾಸಕ ಯಶ್‌ಪಾಲ್ ಸುವರ್ಣ

ಉಡುಪಿ: ರೆಡ್‌ಕ್ರಾಸ್ ಸಂಸ್ಥೆಯು ಮಾನವೀಯತೆಯ ನೆಲೆ ಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದ್ದು, ಯುದ್ಧ, ನೆರೆ ಮತ್ತು ಪ್ರಾಕೃತಿಕ ವಿಕೋಪದಂಥ ಸಂದರ್ಭಗಳಲ್ಲಿ ಮಾಡುವ ಸಮಾಜಮುಖಿ ಸೇವಾ ಚಟುವಟಿಕೆಗಳು ಶ್ಲಾಘನೀಯ ಹಾಗೂ ಸಮಾಜಕ್ಕೆ ಮಾದರಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ನಗರದ ಅಜ್ಜರಕಾಡಿನಲ್ಲಿರುವ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ಬುಧವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ ಮತ್ತು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಯನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ಪ್ರತಿವರ್ಷ ವಿಶ್ವದಾದ್ಯಂತ ಜೂನ್ 14ನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ರಕ್ತದಾನಿಗಳಿಗೆ ಗೌರವವನ್ನು ಈ ಮೂಲಕ ಸಲ್ಲಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಜಿಲ್ಲಾ ಸರ್ಜನ್ ಹಾಗೂ ರಕ್ತನಿಧಿ ಕೇಂದ್ರದ ಸ್ಥಾಪಕ ಡಾ.ಜಗದೀಶ್ ಶರ್ಮ, ರಕ್ತದಾನ, ರಕ್ತದಾನದ ಮಹತ್ವ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ವಿಶ್ವಾಸ್ ತೆಂಕಿಲಾಯ, ಅಶೋಕ್ ನಾಯಕ್, ಕಲಾವತಿ ನಾಯಕ್, ಪಾಂಡುರಂಗ ಅಳ್ವಗದ್ದೆ, ಉದಯ ನಾಯಕ್ ಹಾಗೂ ಮಲ್ಲಿಕಾರ್ಜುನ ಇವರನ್ನುಸನ್ಮಾನಿಸಲಾಯಿತು.
ರೆಡ್‌ಕ್ರಾಸ್ ಗೌರವ ಖಚಾಂಚಿ ರಮಾದೇವಿ, ರೆಡ್‌ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯ ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್, ಬಾಲಕೃಷ್ಣ ಶೆಟ್ಟಿ ಕೆ ಹಾಗೂ ಇತರರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸದಸ್ಯ ರಾಘವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ನಿರೂಪಿಸಿ, ಗೌರವ ಖಚಾಂಚಿ ರಮಾದೇವಿ ವಂದಿಸಿದರು.