ಮಂಗಳೂರು: ಟಿಪ್ಪರ್ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು

ಮಂಗಳೂರು, ಜೂ.14: ನಗರದ ಪಂಪ್‌ವೆಲ್ ಫ್ಲೈ ಓವರ್‌ನ ಕೆಳಗೆ ಬುಧವಾರ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಸ್ಕೂಟರ್ ಸವಾರ ಮೃತಪಟ್ಟಿರುವುದಾಗಿ ಸಂಚಾರ ಪೂರ್ವ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲತಃ ಇಚ್ಲಂಪಾಡಿ ನಿವಾಸಿಯಾಗಿರುವ ನಗರದ ಬೆಂದೂರ್‌ವೆಲ್‌ನಲ್ಲಿರುವ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸಂದೇಶ್ ಥೋಮಸ್ (25) ಮೃತಪಟ್ಟ ಸ್ಕೂಟರ್ ಸವಾರ.
ಇವರು ಮುಂಜಾವ ಸುಮಾರು 4ಕ್ಕೆ ಸ್ಕೂಟರ್‌ನಲ್ಲಿ ಪಂಪ್‌ವೆಲ್ ಫ್ಲೈ ಓವರ್ ಕೆಳಗೆ ತೆರಳುತ್ತಿದ್ದಾಗ ಹಳೆಯ ಕಂಕನಾಡಿ ರಸ್ತೆಯಿಂದ ಪಂಪ್‌ವೆಲ್ ಫ್ಲೈ ಓವರ್ ಕಡೆಗೆ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂದೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸಂದೇಶ್ ಥೋಮಸ್ ತನ್ನ ಗೆಳೆಯನನ್ನು ಸ್ಕೂಟರ್‌ನಲ್ಲಿ ಪಂಪ್‌ವೆಲ್ ಫ್ಲೈ ಓವರ್ ಸಮೀಪದ ಟೀ ಅಂಗಡಿಗೆ ಕರೆತಂದು ಬಿಟ್ಟು ಮತ್ತೋರ್ವ ಗೆಳೆಯನನ್ನು ಕರೆ ತರಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.