ಕೆಲವೊಂದು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ: ಬೊಮ್ಮಾಯಿ ಭೇಟಿ ಬಗ್ಗೆ ಶಾಮನೂರು ಹೇಳಿದ್ದೇನು?

ದಾವಣಗೆರೆ, ಜೂ.14 'ನಾವು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬೀಗರು. ಚುನಾವಣೆ ಆದಾಗಿನಿಂದ ನಾವು ಭೇಟಿ ಆಗಿರಲಿಲ್ಲ. ನಾವಿನ್ನರೂ ಚುನಾವಣೆಯಲ್ಲಿ ಗೆದ್ದಿದ್ದೇವೆ, ನನಗೆ ಅವ್ರು ಹಾರ ಹಾಕಿದ್ರು, ನಾನು ಶಾಲು ಹೊದಿಸಿ, ಅಭಿನಂದಿಸಿದೆ' ಎಂದು ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಬಂಧ ಹೀಗೆಯೇ ಮುಂದುವರಿಯಲಿ ಎಂಬುದಾಗಿ ಹೇಳಿದೆ. ಕೆಲವೊಂದು ವಿಚಾರಗಳನ್ನು ನಾವು ಮಾಧ್ಯಮಗಳ ಮುಂದೆಲ್ಲಾ ಹೇಳಲುಆಗುವುದೂ ಇಲ್ಲ ಎಂದರು.
ಬೊಮ್ಮಾಯಿ ಬಿಜೆಪಿಯವರು. ನಾವು ಕಾಂಗ್ರೆಸಿನವರು. ನಮ್ಮ ಮಧ್ಯೆ ರಾಜಕೀಯ ಮಾತುಕತೆಯಾದರೂ ಏನಿರುತ್ತದೆ? ಹೊಂದಾಣಿಕೆ ರಾಜಕಾರಣ ಮಾಡುವುದಕ್ಕೆ ನಾವು ಚುನಾವಣೆ ಪೂರ್ವದಲ್ಲಿ ಭೇಟಿಯಾಗಿಲ್ಲ. ಚುನಾವಣೆಯ ನಂತರ ಭೇಟಿ ಆಗಿದ್ದೇವೆ. ಮೈಸೂರು ಸಂಸದ ಪ್ರತಾಪ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಾನೆ ಅಂತಾ ನಾನು ನೋಡಿದ್ದೀನಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕುರಿತಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳ ಸಭೆ ಕರೆದು, ತೀರ್ಮಾನ ಕೈಗೊಳ್ಳುತ್ತೇವೆ. ಸಮೀಕ್ಷೆ ಬಹಿರಂಗದ ಸಾದಕ-ಬಾಧಕಗಳ ಬಗ್ಗೆ ಆ ಸಭೆಯಲ್ಲಿ ಚರ್ಚಿಸಿ, ಮಹಾಸಭಾ ಏನು ಮಾಡಬೇಕಂಬ ತೀರ್ಮಾನ ಕೈಗೊಳ್ಳುತ್ತೇವೆ. ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ? ಜಾಮದಾರ ಒಬ್ಬ ಇದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು. ಇಲ್ಲ್ಲಾಂದ್ರೆ ನಾವು ಕಳಿಸುತ್ತೇವೆ. ಪ್ರತ್ಯೇಕ ಧರ್ಮದ ಬಗ್ಗೆ ಮುಂದಿನ ದಿನಗಳಲ್ಲಿ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.







