ಕರಾವಳಿ ಭಾಗದಲ್ಲಿ ಹೈವೇವ್ ಅಲರ್ಟ್ ಘೋಷಣೆ: ಸಮುದ್ರ ಅಬ್ಬರ ಹೆಚ್ಚಳ ಸಾಧ್ಯತೆ
ದ.ಕ.ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ

ಮಂಗಳೂರು, ಜೂ.14: ಮುಂಗಾರು ಮಳೆಯ ಅಬ್ಬರ ಬುಧವಾರವೂ ಕ್ಷೀಣಿಸಿದ್ದು, ದ.ಕ.ಜಿಲ್ಲೆಯ ಕೆಲವು ಕಡೆ ಸಾಧಾರಣ ಮಳೆಯಾಗಿದ್ದು, ಬಿಸಿಲು-ಮೋಡ ಕಂಡು ಬಂದಿತ್ತು. ಈ ಮಧ್ಯೆ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸಂಸ್ಥೆಯು (ಐಎನ್‌ಸಿಒಐಎಸ್) ಕರ್ನಾಟಕ ಕರಾವಳಿ ಭಾಗದಲ್ಲಿ ಹೈ ವೇವ್ ಅಲರ್ಟ್ ಘೋಷಿಸಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂ.17ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಬುಧವಾರ ಕರಾವಳಿಯಲ್ಲಿ ಸರಾಸರಿ 32.1 ಡಿ. ಸೆಲ್ಸಿಯಸ್ ಗರಿಷ್ಟ ಮತ್ತು 24.2 ಡಿ.ಸೆಲ್ಸಿಯಸ್ ಕನಿಷ್ಠ ತಾಪಮಾನ ಇತ್ತು. ಅಲ್ಲದೆ ಕರಾವಳಿಯ ತೀರ ಪ್ರದೇಶದಲ್ಲಿ ಗಾಳಿ ಸಹಿತ ಸೆಕೆಯ ವಾತಾವರಣವಿತ್ತು. ಚಾರ್ಮಡಿ, ಶಿರಾಡಿ, ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿನ ಪಶ್ಚಿಮ ಘಟ್ಟದ ತಪ್ಪಲಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.
ಗುರುವಾರ ಕರ್ನಾಟಕ ಕರಾವಳಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸದ್ಯ ಮುಂಗಾರು ದುರ್ಬಲವಾಗಿದ್ದು, ಜೂನ್ 17, 18ರಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಚುರುಕಾಗುವ ಸಾಧ್ಯತೆ ಇದೆ. ಜೂನ್ 19ರಿಂದ ಉತ್ತರ ಒಳನಾಡು ಸಹಿತ ರಾಜ್ಯಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ದ.ಕ. ಮಳೆ ವಿವರ
ಐಎಂಡಿ ನೀಡಿದ ಮಾಹಿತಿಯಂತೆ ಬುಧವಾರ ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಅತೀ ಹೆಚ್ಚು (28 ಮಿಮಿ) ಮಳೆಯಾಗಿದೆ. ಉಳಿದಂತೆ ಮಂಗಳೂರು 26.6 ಮಿ.ಮಿ., ಉಪ್ಪಿನಂಗಡಿ 10 ಮಿ.ಮಿ., ಪಣಂಬೂರು 12 ಮಿ.ಮಿ., ಮಂಗಳೂರು ವಿಮಾನ ನಿಲ್ದಾಣ 4.6 ಮಿ.ಮಿ., ಧರ್ಮಸ್ಥಳ 11.5 ಮಿ.ಮಿ., ಬೆಳ್ತಂಗಡಿ 6.4 ಮಿ.ಮಿ. ಮಳೆಯಾಗಿದೆ.







