ಹೊಸ ಸರಕಾರ ಬಂದರೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೋಗಿಲ್ಲ: ರೂಪ್ಸಾ ಆರೋಪ

ಬೆಂಗಳೂರು, ಜೂ.14: ಹೊಸ ಸರಕಾರ ಬಂದ ನಂತರವೂ ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರೂಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಈ ಹಿಂದೆ ಎಸೆಸೆಲ್ಸಿ ಬೋರ್ಡ್‍ನ ನಿರ್ದೇಶಕರಾಗಿದ್ದ ಅಧಿಕಾರಿಯು ಈಗ ಕಾಂಗ್ರೆಸ್ ಸರಕಾರ ಬಂದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಇಲಾಖೆಯ ಇತರೆ ಉನ್ನತ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ. ಹಾಗೆಯೆ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಉಪಮುಖ್ಯಮಂತ್ರಿಯನ್ನು ಭೇಟಿಯಾದ ಭಾವಚಿತ್ರವನ್ನು ಅಧಿಕಾರಿಗಳ ಗುಂಪಿನಲ್ಲಿ ಹಂಚಿಕೊಳ್ಳುವ ಮೂಲಕ ಅವರು ಸರಕಾರಕ್ಕೆ, ಉಪಮುಖ್ಯಮಂತ್ರಿಗೆ ಹತ್ತಿರದವರಾಗಿದ್ದಾರೆ ಎಂಬ ರೀತಿ ಬಿಂಬಿಸಿಕೊಂಡಿದ್ದಾರೆ. ಇದು ಉಪಮುಖ್ಯಮಂತ್ರಿಗಳ ಬಗ್ಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಶಾಲೆಗಳು ಆರಂಭವಾಗುವ ಮುನ್ನವೇ ಮಾನ್ಯತೆ ನವೀಕರಣ ಹೆಸರಿನಲ್ಲಿ ಲಕ್ಷಾಂತರ ರೂ.ಗಳ ಲಂಚವನ್ನು ಭ್ರಷ್ಟ ಅಧಿಕಾರಿಗಳು ಶಾಲೆಗಳಿಂದ ವಸೂಲಿ ಮಾಡಿದ್ದಾರೆ. ಮತೀಯ ವಿಷ ಬೀಜವನ್ನು ಬಿತ್ತುವ ಹಾಗೂ ಮಕ್ಕಳ ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸುವ ಪಾಠಗಳನ್ನು ಈಗಾಗಲೇ ಮಕ್ಕಳಿಗೆ ಬೋಧಿಸಲಾಗಿದೆ ಎಂದು ಲೋಕೇಶ್ ತಾಳಿಕಟ್ಟೆ ದೂರಿದ್ದಾರೆ.
ಶಿಕ್ಷಣ ಇಲಾಖೆಯ ಭ್ರಷ್ಟಚಾರದ ವಿರುದ್ಧ 4 ವರ್ಷಗಳಿಂದಲೂ ನಮ್ಮ ಸಂಘಟನೆ ಹೋರಾಟ ಮಾಡುತ್ತಾ ಬಂದಿದೆ. ಆದರೆ ಈಗ ಹೊಸ ಸರಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಇದು ಮುಂದುವರೆದರೆ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಈ ಕುರಿತು ವಿವರಿಸಲು ಸಭೆಯನ್ನು ನಡೆಸಬೇಕು ಎಂದು ಲೋಕೇಶ್ ತಾಳಿಕಟ್ಟೆ ಮನವಿಯನ್ನು ಮಾಡಿದ್ದಾರೆ.







