ಗ್ರೀಸ್ ಕರಾವಳಿಯಲ್ಲಿ ಹಡಗು ಮುಳುಗಿ 78 ವಲಸಿಗರ ಮೃತ್ಯು: 100ಕ್ಕೂ ಅಧಿಕ ಜನರ ರಕ್ಷಣೆ

ಅಥೆನ್ಸ್: ಗ್ರೀಸ್ ನ ಕರಾವಳಿಯಲ್ಲಿ ಮೀನುಗಾರಿಕಾ ದೋಣಿ ಮುಳುಗಿ ಕನಿಷ್ಟ 78 ವಲಸಿಗರು ಮೃತಪಟ್ಟಿದ್ದು ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. 100ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಹೇಳಿದೆ.
ಗ್ರೀಸ್ನ ದಕ್ಷಿಣ ಪೆಲೊಪೊನಿಸ್ ಪ್ರಾಂತದ ಲೋನಿಯನ್ ಸಮುದ್ರದ ಅಂತರಾಷ್ಟ್ರೀಯ ಸಮುದ್ರವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು ಸುಂಟರಗಾಳಿಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಭಾರೀ ಸಂಖ್ಯೆಯಲ್ಲಿದ್ದ ವಲಸಿಗರು ಮೀನುಗಾರಿಕಾ ದೋಣಿಯಲ್ಲಿ ಲಿಬಿಯಾದಿಂದ ಇಟಲಿಯತ್ತ ಪ್ರಯಾಣಿಸುತ್ತಿದ್ದರು.
ಈ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಯುರೋಪ್ನ ವಿಮಾನವೊಂದು ಸಮುದ್ರ ಮಧ್ಯದಲ್ಲಿ ದೋಣಿ ಮುಳುಗಿರುವುದನ್ನು ಪತ್ತೆಹಚ್ಚಿ ತಕ್ಷಣ ಕರಾವಳಿ ಕಾವಲು ಪಡೆಗೆ ಮಾಹಿತಿ ರವಾನಿಸಿದೆ. ದೋಣಿಯಲ್ಲಿದ್ದವರು ಲೈಫ್ ಜಾಕೆಟ್ ಧರಿಸಿರಲಿಲ್ಲ. ಸೇನೆಯ ವಿಮಾನ ಮತ್ತು ಹೆಲಿಕಾಪ್ಟರ್ ಅನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು ಸುಮಾರು 100 ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ 4 ಮಂದಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಹೆಲಿಕಾಪ್ಟರ್ ಮೂಲಕ ಬಂದರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ, ಗ್ರೀಸ್ ಕರಾವಳಿ ಬಳಿ 80 ವಲಸಿಗರಿದ್ದ ಮತ್ತೊಂದು ದೋಣಿ ಮುಳುಗಿದ್ದು ದೋಣಿಯಲ್ಲಿದ್ದವರನ್ನು ಗಸ್ತು ತಿರುಗುತ್ತಿದ್ದ ನೌಕೆ ರಕ್ಷಿಸಿದೆ ಎಂದು ವರದಿಯಾಗಿದೆ.