ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟ: ಎಕ್ಸ್‌ಪರ್ಟ್ ಕಾಲೇಜಿನ ಬೈರೇಶ್‌ಗೆ 48ನೇ ರ‍್ಯಾಂಕ್

ಮಂಗಳೂರು: ವೈದ್ಯಕೀಯ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ನಗರದ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಬೈರೇಶ್ ಎಸ್.ಎಚ್ 48ನೇ ರ‍್ಯಾಂಕ್ ಗಳಿಸಿದ್ದಾರೆ.
ಬೈರೇಶ್ ಕೋಲಾರ ಮೂಲದವರಾಗಿದ್ದು, ಹರೀಶ್.ಎಸ್.ಬಿ ಮತ್ತು ರಾಧಮ್ಮ.ಕೆ ದಂಪತಿಯ ಪುತ್ರ. ಅವರು ನೀಟ್ ಪರೀಕ್ಷೆಯಲ್ಲಿ 720ಕ್ಕೆ 710 ಅಂಕಗಳನ್ನು ಪಡೆದಿದ್ದಾರೆ.
ಬೈರೇಶ್ ಅವರು ಭೌತಶಾಸ್ತ್ರದಲ್ಲಿ ಶೇ.99.94, ರಸಾಯನಶಾಸ್ತ್ರದಲ್ಲಿ ಶೇ. 99.98, ಜೀವಶಾಸ್ತ್ರದಲ್ಲಿ ಶೇ. 99.95, ಒಟ್ಟು ಶೇ 99.99 ಗಳಿಸಿದ್ದಾರೆ.
ಕರ್ನಾಟಕದಲ್ಲಿ ಎರಡನೇ ಅತಿ ಹೆಚ್ಚು ಅಂಕಗಳಿಸಿದವರಾಗಿ ಅವರು ಹೊರಹೊಮಿದ್ದಾರೆ. ಅದೇ ಕಾಲೇಜಿನ ವಿದ್ಯಾರ್ಥಿ ಶಮಿಕ್ ಅಬ್ದುಲ್ ರಹ್ಮಾನ್ 702 ಅಂಕ ಪಡೆದು ರಾಷ್ಟ್ರ ಮಟ್ಟದಲ್ಲಿ 180ನೇ ರ‍್ಯಾಂಕ್ ಗಳಿಸಿದ್ದಾರೆ. ಅರ್ನವ್ ಕಾಮತ್ 700 ಅಂಕ ಪಡೆದು 307ನೇ ರ‍್ಯಾಂಕ್ ಪಡೆದರೆ, ರೋಹಿತ್ ಗೆಜ್ಜೆ 690 ಅಂಕಗಳೊಂದಿಗೆ 868ನೇ ರ‍್ಯಾಂಕ್ ಪಡೆದಿದ್ದಾರೆ. ಒಟ್ಟು 1,365 ವಿದ್ಯಾರ್ಥಿಗಳ ಪೈಕಿ 1,307 ವಿದ್ಯಾರ್ಥಿಗಳು ಈ ವರ್ಷ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಒಟ್ಟು 383 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದು ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು 650ಕ್ಕಿಂತ ಹೆಚ್ಚಿನ ಅಂಕ, 10 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿರುತ್ತಾರೆ. ಮೋಹನ್ ಗೌಡ ಇವರ ಮಗ ವೈಶಾಕ್ ಎಂ 686 ಅಂಕ ಪಡೆದಿದ್ದಾರೆ.
ನೀಟ್‌ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ 11ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಒಟ್ಟು 26 ವಿದ್ಯಾರ್ಥಿಗಳು 550 ಅಂಕಗಳಿಗಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.