ಜೂನ್ 26ರಂದು ಬೆಂಗಳೂರು-ಹುಬ್ಬಳ್ಳಿ ಸಹಿತ 5 ಮಾರ್ಗಗಳಲ್ಲಿ ‘ವಂದೇ ಭಾರತ್’ ರೈಲುಗಳಿಗೆ ಚಾಲನೆ

ಹೊಸದಿಲ್ಲಿ: ಬೆಂಗಳೂರು -ಹುಬ್ಬಳ್ಳಿ ಸೇರಿದಂತೆ ಐದು ರೈಲುಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಜೂನ್ 26ರಂದು ಚಾಲನೆ ನೀಡಲಾಗುವುದು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ವಂದೇಭಾರತ್ ರೈಲುಗಳಿಗೆ ಚಾಲನೆ ನೀಡುವ ನಿರೀಕ್ಷೆಯಿದೆ.
ಮುಂಬೈ-ಗೋವಾ, ಬೆಂಗಳೂರು-ಹುಬ್ಬಳ್ಳಿ, ಪಾಟ್ನಾ-ರಾಂಚಿ, ಭೋಪಾಲ್-ಇಂದೋರ್ ಹಾಗೂ ಭೋಪಾಲ್-ಜಬಲ್ಪುರ ರೈಲು ಮಾರ್ಗಗಳಲ್ಲಿ ವಂದೇಭಾರತ್ ರೈಲುಗಳ ಸಂಚಾರಕ್ಕೆ ಜೂನ್ 26ರಂದು ಚಾಲನೆ ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಮುಂಬೈ-ಗೋವಾ ವಂದೇ ಭಾರತ್ ರೈಲಿನ ಚಾಲನೆ ಜೂನ್ 3ರಂದು ನಡೆಯಬೇಕಿತ್ತು. ಆದರೆ ಜೂನ್ 2ರಂದು ಒಡಿಶಾದಲ್ಲಿ 288 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ತ್ರಿವಳಿ ರೈಲು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಒಂದೇ ದಿನದಂದು ಐದು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುತ್ತಿರುವುದು ಇದೇ ಮೊದಲ ಸಲವಾಗಿದೆ. ಒಡಿಶಾ ರೈಲು ದುರಂತದ ಹಿನ್ನೆಲೆಯಲ್ಲಿ ಈ ಬಾರಿ ವಂದೇಭಾರತ್ ರೈಲುಗಳ ಉದ್ಘಾಟನೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆಯೆಂದು ಮೂಲಗಳು ಹೇಳಿವೆ.