ಪಂಚಾಯತ್ ಚುನಾವಣೆಗಾಗಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಿ:ಪಶ್ಚಿಮ ಬಂಗಾಳ ಚುನಾವಣಾ ಆಯೋಗಕ್ಕೆ ಕಲ್ಕತ್ತಾ ಹೈಕೋರ್ಟ್ ಆದೇಶ

ಕೋಲ್ಕತ: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ಮುನ್ನ ಹಿಂಸಾಚಾರ ಸಂಭವಿಸಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕೇಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ಪಶ್ಚಿಮಬಂಗಾಳದಲ್ಲಿ ಪಂಚಾಯತ್ ಚುನಾವಣೆಯು ಜುಲೈ 8ರಂದು ನಡೆಯಲಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೇಳೆ ಹಲವಾರು ಹಿಂಸಾಚಾರ ಘಟನೆಗಳು ಸಂಭವಿಸಿರುವುದು ವರದಿಯಾಗಿದೆ. ನಾಮಪತ್ರ ಸಲ್ಲಿಕೆಯು ಜೂನ್ 9ರಂದು ಆರಂಭವಾಗಿದ್ದು, ಜೂನ್ 15ರಂದು ಕೊನೆಗೊಳ್ಳುತ್ತದೆ.
ಜೂನ್ 11ರಂದು ಪೂರ್ವ ಬರ್ದಮಾನ್ ಜಿಲ್ಲೆಯ ಬರ್ಸುಲ್ನಲ್ಲಿ ಹಿಂಸಾಚಾರ ಸಂಭವಿಸಿದ್ದು, ಎಡಪಕ್ಷಗಳ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಉತ್ತರ 24 ಪರಗಣಾಸ್ ಜಿಲ್ಲೆಯ ಮಿನಖಾನ್ ಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಸಿಪಿಎಮ್ ರಾಜ್ಯ ಸಮಿತಿ ಸದಸ್ಯ ಸೋಮ ದಾಸ್ರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ಪಕ್ಷದ ಕಚೇರಿ ಮತ್ತು ಕಚೇರಿಯ ಹೊರಗಡೆ ನಿಲ್ಲಿಸಲಾಗಿದ್ದ ಹಲವು ಮೋಟರ್ಬೈಕ್ಗಳನ್ನು ಧ್ವಂಸಗೊಳಿಸಲಾಗಿದೆ.
ಬಂಕುರ ಜಿಲ್ಲೆಯ ಸೋನಮುಖಿ ಪಟ್ಟಣದಲ್ಲಿ, ಭಾರತೀಯ ಜನತಾ ಪಕ್ಷದ ನಾಯಕ ದೇವ್ ಶಂಕರ್ ಮಂಡಲ್ ನಾಮಪತ್ರ ಸಲ್ಲಿಸುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಉತ್ತರ ದೀನಜ್ಪುರ ಜಿಲ್ಲೆ ಮತ್ತು ನಾದಿಯ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದಾಗಿ ವರದಿಯಾಗಿದೆ.
ಮಂಗಳವಾರ, ಮುಖ್ಯ ನ್ಯಾಯಾಧೀಶ ಟಿ.ಎಸ್. ಶಿವಜ್ಞಾಮನ್ ಮತ್ತು ನ್ಯಾಯಮೂರ್ತಿ ಹಿರಣ್ಮಯ ಭಟ್ಟಾಚಾರ್ಯ ಅವರನ್ನೊಳಗೊಂಡ ನ್ಯಾಯಪೀಠವೊಂದು ಪ್ರತಿಪಕ್ಷ ನಾಯಕರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ಈ ತೀರ್ಪು ನೀಡಿತು. ಹಿಂಸಾಚಾರ ಘಟನೆಗಳು ತಮ್ಮ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಿವೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.
ಸೂಕ್ಷ್ಮ ಎಂಬುದಾಗಿ ಚುನಾವಣಾ ಆಯೋಗವು ಗುರುತಿಸಿದ ಪ್ರದೇಶಗಳು ಮತ್ತು ಜಿಲ್ಲೆಗಳಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ನ್ಯಾಯಾಲಯವು ಆದೇಶಿಸಿದೆ.
‘‘ಆ ಬಳಿಕ, ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರಕಾರ ಸಲ್ಲಿಸುವ ಅವಲೋಕನ ವರದಿಯನ್ನು ಪರಿಶೀಲಿಸಬೇಕು ಮತ್ತು ಯಾವ ಸ್ಥಳಗಳಲ್ಲಿ ರಾಜ್ಯ ಪೊಲೀಸ್ ಪಡೆಯ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಇಲ್ಲವೋ ಅಲ್ಲಿ ಅರೆಸೈನಿಕ ಪಡೆಗಳ ನಿಯೋಜನೆಗೆ ಸೂಚಿಸಬೇಕು’’ ಎಂದು ನ್ಯಾಯಾಲಯ ಸೂಚಿಸಿದೆ.
ಎಲ್ಲಾ ಮತಗಟ್ಟೆಗಳು ಮತ್ತು ಮತ ಎಣಿಕಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಆದರೆ, ನಾಮಪತ್ರ ಸಲ್ಲಿಕೆ ಅವಧಿಯನ್ನು ವಿಸ್ತರಿಸಬೇಕೆನ್ನುವ ಮನವಿಯನ್ನು ಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿತು. ಈ ಕುರಿತ ನಿರ್ಧಾರವನ್ನು ಚುನಾವಣಾ ಅಯೋಗದ ವಿವೇಚನೆಗೆ ಬಿಟ್ಟಿತು.







