ದಕ್ಷಿಣ ಕೊರಿಯನ್ನರ ಡೇಟಾ ಕಳವಿಗೆ ಕಿಮ್ ಜಾಂಗ್ ಯತ್ನ: ವರದಿ

ಸಿಯೋಲ್: ದಕ್ಷಿಣ ಕೊರಿಯಾದ ಇಂಟರ್ನೆಟ್ ಪೋರ್ಟಲ್ ‘ನೇವರ್’ನ ನಕಲಿ ಆವೃತ್ತಿ ಸೃಷ್ಟಿಸಿ ಅದರ ಮೂಲಕ ದಕ್ಷಿಣ ಕೊರಿಯನ್ನರ ವೈಯಕ್ತಿಕ ಡೇಟಾ ಕಳವಿಗೆ ಉತ್ತರ ಕೊರಿಯಾ ಪ್ರಯತ್ನಿಸುತ್ತಿದೆ ಎಂದು ಸಿಯೋಲ್ನ ಬೇಹುಗಾರಿಕಾ ಏಜೆನ್ಸಿ ವರದಿ ಮಾಡಿದೆ.
ಗೂಗಲ್ ತರಹದ ನಕ್ಷೆಗಳು, ಆ್ಯಪಲ್ ಪೇ ರೀತಿಯ ಹಣಕಾಸು ಸೇವೆಯನ್ನು ನೇವರ್ ಒದಗಿಸುತ್ತಿದ್ದು ಇದನ್ನು ದಿನಾ ಹಲವರು ಕೊರಿಯನ್ನರು ಬಳಸುತ್ತಿದ್ದು ದಕ್ಷಿಣ ಕೊರಿಯಾದ ಬೃಹತ್ ಟೆಕ್ ಸಂಸ್ಥೆಗಳಲ್ಲಿ ಒಂದಾಗಿದೆ.
ನೇವರ್ನ ಮುಖ್ಯಪುಟವನ್ನೇ ಹೋಲುವ ‘ನೇವರ್ಪೋರ್ಟಲ್.ಕಾಮ್’ ಎಂಬ ನಕಲಿ ಸೈಟ್ ಪ್ರಾರಂಭಿಸಿ ಅದರ ಮೂಲಕ ನೇವರ್ನಲ್ಲಿರುವ ಗುರುತು ಚೀಟಿ, ಪಾಸ್ವರ್ಡ್ಗಳನ್ನು ಕದ್ದು ರಹಸ್ಯ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಈ ವ್ಯವಸ್ಥೆ ಅತ್ಯಾಧುನಿಕವಾಗಿರುವುದರಿಂದ ಜನತೆ ಹೆಚ್ಚು ಜಾಗರೂಕರಾಗುವ ಅಗತ್ಯವಿದೆ. ನಕಲಿ ಸೈಟ್ ಬಳಸಿ ಮಾಹಿತಿ ಕದಿಯುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆಯೂ ನೇವರ್ನ ಲಾಗ್-ಇನ್ ಪುಟದ ನಕಲಿ ಆವೃತ್ತಿಯ ಮೂಲಕ ದಕ್ಷಿಣ ಕೊರಿಯನ್ನರ ಗುರುತುಚೀಟಿ, ಪಾಸ್ವರ್ಡ್ ಕದಿಯಲು ಉತ್ತರ ಕೊರಿಯಾ ಪ್ರಯತ್ನಿಸುತ್ತಿತ್ತು. ಆದರೆ ಈಗ ಅತ್ಯಾಧುನಿಕ ವಿಧಾನ ಬಳಸಿರುವುದರಿಂದ ಜನತೆ ಹೆಚ್ಚು ಜಾಗರೂಕರಾಗುವ ಅಗತ್ಯವಿದೆ. ನಕಲಿ ಏಜೆನ್ಸಿಯ ಸರ್ವರ್ ಸಾಗರೋತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ನೇವರ್ ಅಧಿಕಾರಿಗಳು ಹೇಳಿದ್ದಾರೆ.