ಮೂಳೂರಿನಲ್ಲಿ ಕಡಲ್ಕೊರೆತ

ಕಾಪು: ಕಾಪು ತಾಲೂಕಿನ ಮೂಳೂರು ಪರಿಸರದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಇಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಈ ಭಾಗದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಮೂಳೂರಿನ ಲತಾ ಎಸ್. ಪೂಜಾರಿ, ರತ್ನಾ ಪೂಜಾರಿ, ಲೀಲಾ ಪೂಜಾರಿ, ಮಹಾಲಿಂಗ ಪೂಜಾರಿ, ದಿನೇಶ್ ಪೂಜಾರಿ, ನಳಿನಾಕ್ಷಿ ಪೂಜಾರಿ ಜಾಗದಲ್ಲಿ ತೀವ್ರ ಕೊರೆತ ಉಂಟಾಗಿದೆ. ಕಡಲ್ಕೊರೆತದಿಂದ ಕಡಲ್ಕೊರೆತಕ್ಕೆ ಅಳವಡಿಸಿದ ಬಂಡೆಕಲ್ಲುಗಳು ಸಮುದ್ರದ ಒಡಲು ಸೇರುತ್ತಿದೆ. ಅಲ್ಲದೆ ಸಮುದ್ರ ತೀರದ ತೆಂಗಿನ ಮರಗಳು, ಭೂ ಭಾಗಗಳು ಸಮುದ್ರ ಪಾಲಾಗುತ್ತಿದೆ. ಈ ಬಗ್ಗೆ ಕಡಲತೀರದ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಕಳೆದ ವರ್ಷ ಕಡಲ್ಕೊರೆತ ದೊಡ್ಡ ಪ್ರಯಾಣದಲ್ಲಿ ಆದಾಗ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ ನಂತರ ವ್ಯವಸ್ಥಿತವಾಗಿ ತಡೆಗೋಡೆ ನಿರ್ಮಿಸದೇ ಈ ಬಾರಿಯೂ ಕಡಲ್ಕೊರೆತ ಉಂಟಾಗಿದೆ. ಆದರೆ ಇದುವರೆಗೂ ಯಾರೂ ಜನಪ್ರತಿನಿಧಿಗಳು ಇತ್ತ ಸುಳಿಯಲಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಕಾಪು ಲೈಟ್ ಹೌಸ್ ಬೀಚ್, ಪಡುಬಿದ್ರಿ ಮುಖ್ಯ ಬೀಚ್, ಹಾಗೂ ಬ್ಲೂಫ್ಲ್ಯಾಗ್ ಬೀಚ್, ಎರ್ಮಾಳು, ಕಾಪು ಪರಿಸರದಲ್ಲೂ ಕಡಲ್ಕೊರೆತ ಭೀತಿ ಉಂಟಾಗಿದೆ.







