ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯ ಸೇನ್, ಶ್ರೀಕಾಂತ್ ಶುಭಾರಂಭ

ಜಕಾರ್ತ: ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲಕ್ಷ್ಯಸೇನ್ ಹಾಗೂ ಕೆ.ಶ್ರೀಕಾಂತ್ ಮೊದಲ ಸುತ್ತಿನಲ್ಲಿ ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿ ಶುಭಾರಂಭ ಮಾಡಿದರು.
ಬಿಡಬ್ಲುಎಫ್ ವರ್ಲ್ಡ್ ಟೂರ್‌ನಲ್ಲಿ ವರ್ಷದ ಮೂರನೇ ಹಾಗೂ ಅಂತಿಮ ಸೂಪರ್ 1000 ಟೂರ್ನಿಯಾಗಿರುವ ಇಂಡೋನೇಶ್ಯ ಓಪನ್‌ನಲ್ಲಿ ಬುಧವಾರ ವಿಶ್ವದ ನಂ.19ನೇ ಆಟಗಾರ ಲಕ್ಷ ಕೇವಲ 33 ನಿಮಿಷಗಳ ಹೋರಾಟದಲ್ಲಿ ವಿಶ್ವದ ನಂ.11ನೇ ಆಟಗಾರ ಲೀ ಝಿ ಜಿಯಾರನ್ನು 21-17 ಹಾಗೂ 21-13 ಗೇಮ್‌ಗಳ ಅಂತರದಿಂದ ಮಣಿಸಿದರು. ಭಾರತದ ಯುವ ಆಟಗಾರ ಸೇನ್ ಥಾಯ್ಲೆಂಡ್ ಓಪನ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರೆ, ಸಿಂಗಾಪುರ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದ್ದರು.
ಮಲೇಶ್ಯದ ಲೀ ಹಾಗೂ ಸೇನ್ ಜೋಡಿ ಈ ವರ್ಷ ಮೊದಲ ಬಾರಿ ಮುಖಾಮುಖಿಯಾಗಿದ್ದಾರೆ. 2022ರ ಮೇನಲ್ಲಿ ಥಾಮಸ್ ಕಪ್‌ನಲ್ಲಿ ಕೊನೆಯಬಾರಿ ಮುಖಾಮುಖಿಯಾಗಿದ್ದರು. ಆಗ ಸೇನ್ ಭಾರತದ ನಿರ್ಣಾಯಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ಮಾಜಿ ನಂ. 2ನೇ ಆಟಗಾರ ಲೀ ವಿರುದ್ಧ ಸೋತಿದ್ದರು. ಇಂದಿನ ಗೆಲುವಿನೊಂದಿಗೆ ಲಕ್ಷ ಸೇನ್ ಅವರು ಲೀ ವಿರುದ್ಧ 3-1 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ.
ಇದೇ ವೇಳೆ ಮತ್ತೊಂದು ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಕೇವಲ 46 ನಿಮಿಷಗಳಲ್ಲಿ ಚೀನಾದ ಲು-ಗ್ವಾಂಗ್ ಝು ಅವರನ್ನು 21-13, 21-19 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಶ್ರೀಕಾಂತ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಲಕ್ಷರನ್ನು ಎದುರಿಸುವ ಸಾಧ್ಯತೆಯಿದೆ.
ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡಸರ್ನ್ ಗಾಯದ ಸಮಸ್ಯೆಯ ಕಾರಣಕ್ಕೆ ವಾಕ್‌ಓವರ್ ಪಡೆದಿದ್ದು, ಕ್ವಾಲಿಫೈಯರ್ ಪ್ರಿಯಾಂಶು ರಾಜಾವತ್ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪ್ರಿಯಾಂಶು ಅಂತಿಮ-16ರ ಪಂದ್ಯದಲ್ಲಿ ಅಂಥೋನಿ ಸಿನಿಸುಕ ಜಿಂಟಿಂಗ್ ಹಾಗೂ ಹ್ಯಾನ್ಸ್ -ಕ್ರಿಸ್ಟಿಯನ್ ವಿಟಿಂಘಸ್ ನಡುವಿನ ಪಂದ್ಯದಲ್ಲಿನ ವಿಜೇತರನ್ನು ಎದುರಿಸಲಿದ್ದಾರೆ.







