ಬ್ರಿಟನ್: ವೈದ್ಯರ ಮುಷ್ಕರ
ಲಂಡನ್: ಬ್ರಿಟನ್ನ ಆಸ್ಪತ್ರೆಯ ವೈದ್ಯರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬುಧವಾರದಿಂದ 72 ಗಂಟೆಗಳ ಮುಷ್ಕರ ಆರಂಭಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ಭಾರೀ ತೊಡಕಾಗಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಮೊದಲು ನರ್ಸ್ಗಳು ಹಾಗೂ ಇತರ ವೈದ್ಯಕೀಯ ಸಿಬಂದಿಗಳು ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದರು. ಬುಧವಾರ ಬೆಳಿಗ್ಗೆ 7 ಗಂಟೆಯಿಂದ ಕಿರಿಯ ವೈದ್ಯರು ಮುಷ್ಕರ ಆರಂಭಿಸಿದ್ದು ಶನಿವಾರದವರೆಗೆ ಮುಷ್ಕರ ಮುಂದುವರಿಯಲಿದೆ. ಕಳೆದ 15 ವರ್ಷಗಳಲ್ಲಿ ಕ್ರಮಬದ್ಧ ರೀತಿಯಲ್ಲಿ ಇನ್ಕ್ರಿಮೆಂಟ್ ನೀಡದ ಕಾರಣ ತಮಗೆ 26%ದಷ್ಟು ವೇತನ ಕಡಿಮೆ ದೊರೆಯುತ್ತಿದೆ. 2008-09ರ ಮಟ್ಟಕ್ಕೆ ವೇತನವನ್ನು ಮರುಸ್ಥಾಪಿಸಿ ಇನ್ಕ್ರಿಮೆಂಟ್ ನೀಡಬೇಕು ಎಂದು ಕಿರಿಯ ವೈದ್ಯರ ಸಂಘಟನೆ ಆಗ್ರಹಿಸುತ್ತಿದೆ.
ಆದರೆ ಹೀಗೆ ಮಾಡಿದರೆ ಈ ವರ್ಷ ವೇತನದ ಮೇಲೆ ಸರಾಸರಿ 35%ದಷ್ಟು ಇನ್ಕ್ರಿಮೆಂಟ್ ನೀಡಿದಂತಾಗುತ್ತದೆ. ಇದು ಸಾಧ್ಯವಿಲ್ಲ ಎಂದು ಸರಕಾರ ಹೇಳುತ್ತಿದೆ. ಈ ವಿಷಯದಲ್ಲಿ ಸರಕಾರದ ಜತೆ ಮಾತುಕತೆಗೆ ಸಿದ್ಧವಿದ್ದೇವೆ. ಆದರೆ ಸರಕಾರ ತನ್ನ ನಿಲುವಿಗೆ ಅಂಟಿಕೊಂಡರೆ ಮುಂದಿನ ದಿನದಲ್ಲಿ ಮುಷ್ಕರ ತೀವ್ರಗೊಳ್ಳಲಿದೆ ಎಂದು ವೈದ್ಯರ ಸಂಘಟನೆ ಹೇಳಿದೆ.





