ವಿಂಡೀಸ್ ಪ್ರವಾಸದೊಂದಿಗೆ ಭಾರತದ 2023-25ರ ಡಬ್ಲ್ಯುಟಿಸಿ ಸರಣಿ ಆರಂಭ

ಹೊಸದಿಲ್ಲಿ: ಜುಲೈನಲ್ಲಿ ವೆಸ್ಟ್‌ಇಂಡೀಸ್ ಪ್ರವಾಸದ ಮೂಲಕ ಭಾರತ ಕ್ರಿಕೆಟ್ ತಂಡ 2023-2025ರ ಐಸಿಸಿ ವರ್ಲ್ಡ್‌ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ) ಸರಣಿಯನ್ನು ಆರಂಭಿಸಲಿದೆ. ಎರಡು ವರ್ಷಗಳ ಅವಧಿಯಲ್ಲಿ ಭಾರತವು ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ವಿರುದ್ಧದ ಹಣಾಹಣಿ ಸಹಿತ ಹಲವು ಪ್ರಮುಖ ದ್ವಿಪಕ್ಷೀಯ ಸರಣಿಗಳಲ್ಲಿ ಆಡಲಿದೆ.
ಮುಂದಿನ ತಿಂಗಳು ಭಾರತವು ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯವು ಜುಲೈ 12ರಿಂದ 16ರ ತನಕ ಡೊಮಿನಿಕಾದಲ್ಲಿ ನಡೆದರೆ, 2ನೇ ಪಂದ್ಯವು ಜು.20ರಿಂದ 24ರ ತನಕ ಟ್ರಿನಿಡಾಡ್‌ನಲ್ಲಿ ನಡೆಯಲಿದೆ.
ಕಳೆದೆರಡು ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತವು ಫೈನಲ್ ತಲುಪಿತ್ತು. ಆದರೆ 2021ರಲ್ಲಿ ನ್ಯೂಝಿಲ್ಯಾಂಡ್ ಹಾಗೂ 2023ರಲ್ಲಿ ಆಸ್ಟ್ರೇಲಿಯದ ವಿರುದ್ಧ ಫೈನಲ್‌ನಲ್ಲಿ ಸೋಲುಂಡಿದೆ. ವೆಸ್ಟ್‌ಇಂಡೀಸ್ ಪ್ರವಾಸದ ನಂತರ ಭಾರತವು ದಕ್ಷಿಣ ಆಫ್ರಿಕಾದ ವಿರುದ್ಧ ಡಿಸೆಂಬರ್ 2023 ಹಾಗೂ ಜನವರಿ 2024ರಲ್ಲಿ ಸರಣಿಯನ್ನು ಆಡಲಿದೆ.
ಆನಂತರ ಜನವರಿ-ಫೆಬ್ರವರಿ 2024ರಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ ಆತಿಥ್ಯವಹಿಸಲಿದೆ. ಆಬಳಿಕ 2024ರ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಸ್ವದೇಶದಲ್ಲಿ ಬಾಂಗ್ಲಾದೇಶ ವಿರುದ್ಧ ಹೋರಾಡಲಿದೆ. ಅಕ್ಟೋಬರ್-ನವೆಂಬರ್ 2024ರಲ್ಲಿ ನ್ಯೂಝಿಲ್ಯಾಂಡ್ ತಂಡ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ.
ನವೆಂಬರ್ 2024 ಹಾಗೂ ಜನವರಿ 2025ರಲ್ಲಿ ಆಸ್ಟ್ರೇಲಿಯ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಪಿಗಾಗಿ 5 ಪಂದ್ಯಗಳ ಸರಣಿಯನ್ನಾಡಲು ಭಾರತವು ಆಸ್ಟ್ರೇಲಿಯಕ್ಕೆ ಪ್ರಯಾಣಿಸಲಿದೆ.







