ಪತ್ನಿ, ಮೂವರು ಪುತ್ರಿಯರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಆರೋಪಿ: ತಪ್ಪಿಸಿಕೊಂಡ ಇಬ್ಬರು ಪುತ್ರರು

ಪಾಟ್ನಾ: ಬಿಹಾರದ ಖಗೇರಿಯ ಜಿಲ್ಲೆಯ ಎಕಾನಿಯ ಎಂಬ ಗ್ರಾಮದಲ್ಲಿ ಬುಧವಾರ 40 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮೂವರು ಪುತ್ರಿಯರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಜಾನೆ 1:30ರ ಸುಮಾರಿಗೆ ಈ ಮನಕಲಕುವ ಘಟನೆ ನಡೆದಿದೆ. ಮುನ್ನಾ ಯಾದವ್, ತನ್ನ ಹೆಂಡತಿ ಪೂಜಾ ದೇವಿ (32) ಮಲಗಿದ್ದಾಗ ಚೂರಿಯಿಂದ ಕತ್ತನ್ನು ಸೀಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುನ್ನಾ ಯಾದವ್ ವಿರುದ್ಧ ಕೊಲೆ ಪ್ರಕರಣವೊಂದು ದಾಖಲಾಗಿದೆ. ಹಾಗಾಗಿ, ಆತ ಶರಣಾಗಬೇಕೆಂದು ಹೆಂಡತಿ ಒತ್ತಾಯಿಸುತ್ತಿದ್ದರು. ಈ ವಿಷಯದಲ್ಲಿ ಗಂಡ ಮತ್ತು ಹೆಂಡತಿ ನಡುವೆ ಜಗಳ ಆಗಿತ್ತು ಎನ್ನಲಾಗಿದೆ.
ಮುನ್ನಾ ಬಳಿಕ ತನ್ನ ಮೂವರು ಪುತ್ರಿಯರಾದ ಸುಮನ್ ಕುಮಾರಿ (18), ಆಂಚಲ್ ಕುಮಾರಿ (16) ಮತ್ತು ರೋಶನಿ ಕುಮಾರಿ (15)ಯನ್ನು ಅದೇ ಚೂರಿಯಿಂದ ಕೊಂದನು. ಪುತ್ರಿಯರು ಮನೆಯ ಛಾವಣಿಯಲ್ಲಿ ನಿದ್ರಿಸುತ್ತಿದ್ದರು. ಬಳಿಕ ತನ್ನ ಇಬ್ಬರು ಪುತ್ರರಾದ ಅಂಕಿತ್ ಕುಮಾರ್ (12) ಮತ್ತು ಆದಿತ್ಯ ಕುಮಾರ್ (10)ನನ್ನೂ ಕೊಲ್ಲಲು ಆತ ವಿಫಲ ಯತ್ನ ಮಾಡಿದನು. ಆದರೆ, ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಮುನ್ನಾ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡನು ಎಂದು ಪೊಲೀಸರು ಹೇಳಿದ್ದಾರೆ.
ತಂದೆಯ ಕೈಯಲ್ಲಿ ಚೂರಿಯನ್ನು ನೋಡಿ ನಾವು ಮನೆಯಿಂದ ಓಡಿ ಹೋದೆವು ಎಂದು ಪುತ್ರರು ಪೊಲೀಸರಿಗೆ ತಿಳಿಸಿದ್ದಾರೆ. ‘‘ಅವರು ನಮ್ಮ ಸಹೋದರಿಯರಿಗೆ ಒಬ್ಬರ ನಂತರ ಒಬ್ಬರಂತೆ ಇರಿಯುತ್ತಿದ್ದರು. ನಾವು ಇನ್ನೊಂದು ಕೋಣೆಯಲ್ಲಿ ಅಡಗಿ ಕುಳಿತು ನಮ್ಮ ಪ್ರಾಣ ಉಳಿಸಿಕೊಂಡೆವು’’ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಅಕ್ಟೊಬರ್ನಲ್ಲಿ ದಾಖಲಾದ ಕೊಲೆ ಪ್ರಕರಣವೊಂದರಲ್ಲಿ ಆತನ ವಿರುದ್ಧ ಮೊಕದ್ದಮೆ ದಾಖಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಅಂದಿನಿಂದ ಅವನು ಪೊಲೀಸರಿಂದ ತಪ್ಪಿಸಿಕೊಂಡಿದ್ದನು. ನ್ಯಾಯಾಲಯದಲ್ಲಿ ಶರಣಾಗುವಂತೆ ಹೆಂಡತಿ ಆತನ ಮೇಲೆ ಒತ್ತಡ ಹೇರುತ್ತಿದ್ದರು. ಅದನ್ನು ಆತ ತಿರಸ್ಕರಿಸಿದ್ದ ಎಂದು ನೆರೆಯ ವ್ಯಕ್ತಿಯೊಬ್ಬರು ಹೇಳಿದರು.
ಇದೇ ಕೊಲೆ ಪ್ರಕರಣದಲ್ಲಿ ಮುನ್ನಾನ ಅಣ್ಣ ಬಿಮಲ್ ಯಾದವ್ ಜೈಲಿನಲ್ಲಿದ್ದಾನೆ.







