2024ರ ಲೋಕಸಭೆ ಚುನಾವಣೆಗೆ ಮುನ್ನ "ವಿರೋಧ ಪಕ್ಷಗಳ ಒಗ್ಗಟ್ಟಿನಿಂದ" ಯಾವುದೇ ಪ್ರಯೋಜನವಾಗುವುದಿಲ್ಲ: ಆಝಾದ್

ಶ್ರೀನಗರ: 2024ರ ಲೋಕಸಭೆ ಚುನಾವಣೆಗೆ ಮುನ್ನ "ವಿರೋಧ ಪಕ್ಷಗಳ ಒಗ್ಗಟ್ಟಿನಿಂದ" ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಝಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಝಾದ್(Ghulam Nabi Azad) ಬುಧವಾರ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕರೆದಿರುವ ವಿರೋಧ ಪಕ್ಷಗಳ ಸಭೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಝಾದ್ , ಆ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಹೇಳಿದರು.
“ಎರಡೂ ಕಡೆಯಲ್ಲಿ ಏನಾದರೂ ಇದ್ದಾಗ ಮಾತ್ರ ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಲಾಭವಾಗುತ್ತದೆ. ಇಬ್ಬರಿಗೂ ಪ್ರಯೋಜನಗಳ ಪಾಲಿನಲ್ಲಿ ವ್ಯತ್ಯಾಸವಿರಬಹುದು ... ಅದು 50-50 ಅಥವಾ 60-40 ಆಗಿರಬಹುದು. ಆದರೆ ಈ ಸಂದರ್ಭದಲ್ಲಿ, ಎರಡೂ ಕಡೆಯವರು ಮತ್ತೊಬ್ಬರಿಗೆ ನೀಡಲು ಏನೂ ಇಲ್ಲ" ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳವನ್ನು ಉಲ್ಲೇಖಿಸಿದ ಆಝಾದ್ ಅವರು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಆ ರಾಜ್ಯದಲ್ಲಿ ಯಾವುದೇ ಶಾಸಕರನ್ನು ಹೊಂದಿಲ್ಲ. ಆಶ್ಚರ್ಯಕರ ರೀತಿಯಲ್ಲಿ ಎರಡು ಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೊಂದಿಗೆ ಮೈತ್ರಿ ಮಾಡಿಕೊಂಡರೆ ಇವುಗಳು ಏನು ಗಳಿಸುತ್ತವೆ?.
"ಬ್ಯಾನರ್ಜಿ ಏಕೆ ಮೈತ್ರಿ ಮಾಡಿಕೊಳ್ಳುತ್ತಾರೆ? ಅದರಿಂದ ಅವರಿಗೆ ಏನು ಲಾಭ? ಹಾಗೆಯೇ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಟಿಎಂಸಿಗೆ ಯಾವುದೇ ಶಾಸಕರಿಲ್ಲ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಅವರಿಗೆ ಏನು ನೀಡುತ್ತದೆ? ಏನೂ ಇಲ್ಲ" ಎಂದು ಆಝಾದ್ ಹೇಳಿದರು.
ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅವರಿಗೆ (ಜಗಮೋಹನ್ ರೆಡ್ಡಿ) ಏನು ನೀಡುತ್ತದೆ ಹಾಗೂ ರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಏನು ಕೊಡುತ್ತಾರೆ?" . ವಿರೋಧಪಕ್ಷದ ಒಗ್ಗಟ್ಟು ಒಂದು "ಒಳ್ಳೆಯ ಫೋಟೋಕ್ಕೆ ಅವಕಾಶ ಅಷ್ಟೇ" ಎಂದು ಆಝಾದ್ ಪ್ರತಿಪಾದಿಸಿದರು.
ಆದಾಗ್ಯೂ, ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲು ಪ್ರತಿಪಕ್ಷಗಳು ಒಂದಾಗಬೇಕೆಂದು ಬಯಸುವುದಾಗಿ ಮಾಜಿ ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.
"ಆದರೆ ದುರದೃಷ್ಟವಶಾತ್, ಪ್ರತಿ ವಿರೋಧ ಪಕ್ಷಗಳು ತಮ್ಮ ರಾಜ್ಯಗಳನ್ನು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಏನನ್ನೂ ಹೊಂದಿಲ್ಲ. ಎರಡು-ಮೂರು ಪಕ್ಷಗಳು ರಾಜ್ಯಗಳಲ್ಲಿ (ಮೈತ್ರಿಕೂಟದಲ್ಲಿ) ಸರಕಾರಗಳನ್ನು ರಚಿಸಿದರೆ ಅದು ಪ್ರಯೋಜನಕಾರಿಯಾಗುತ್ತದೆ''ಎಂದರು.







