2022-23ನೇ ಸಾಲಿನಲ್ಲಿ ಭಾರತದ ʼಸಾಗರೋತ್ಪನ್ನಗಳʼ ರಫ್ತಿನಲ್ಲಿ ಭಾರಿ ಏರಿಕೆ

ಹೊಸ ದಿಲ್ಲಿ: ತನ್ನ ಪ್ರಮುಖ ರಫ್ತು ದೇಶವಾದ ಅಮೆರಿಕಾ ಮಾರುಕಟ್ಟೆಯಲ್ಲಿನ ಹಲವಾರು ಸವಾಲುಗಳ ನಡುವೆಯೂ 2022-23ನೇ ಸಾಲಿನಲ್ಲಿ 8.09 ಶತಕೋಟಿ ಡಾಲರ್ ಮೌಲ್ಯದ 17,35,286 ದಶಲಕ್ಷ ಟನ್ ಸಾಗರೋತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಪ್ರಮಾಣ ಮತ್ತು ಮೌಲ್ಯ, ಅಮೆರಿಕಾ ಡಾಲರ್ ಮತ್ತು ರೂಪಾಯಿ ಮೌಲ್ಯಗಳೆರಡರ ಲೆಕ್ಕದಲ್ಲೂ ಭಾರತ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ ಎಂದು indiabloom.com ವರದಿ ಮಾಡಿದೆ.
2022-23ನೇ ಸಾಲಿನಲ್ಲಿ ಪ್ರಮಾಣದ ಲೆಕ್ಕದಲ್ಲಿ ಶೇ. 26.73, ರೂಪಾಯಿ ಮೌಲ್ಯದ ಲೆಕ್ಕದಲ್ಲಿ ರೂ. 11.08 ಹಾಗೂ ಅಮೆರಿಕಾ ಡಾಲರ್ ಮೌಲ್ಯದ ಲೆಕ್ಕದಲ್ಲಿ ಶೇ. 4.31 ಏರಿಕೆ ಕಾಣುವ ಮೂಲಕ ಭಾರತದ ಸಾಗರೋತ್ಪನ್ನ ರಫ್ತು ಪ್ರಮಾಣ ಗಮನಾರ್ಹ ಸುಧಾರಣೆ ಕಂಡಿದೆ. ಇದಕ್ಕೂ ಮುನ್ನ 2021-22ನೇ ಸಾಲಿನಲ್ಲಿ ರೂ. 57,586.48 ಕೋಟಿ ಮೌಲ್ಯ (7,759.58 ದಶಲಕ್ಷ ಅಮೆರಿಕಾ ಡಾಲರ್ ಮೌಲ್ಯ) ದ ಸಾಗರೋತ್ಪನ್ನಗಳನ್ನು ಭಾರತ ರಫ್ತು ಮಾಡಿತ್ತು.
ರೂ. 43,135.58 ಕೋಟಿ (5481.63 ದಶಲಕ್ಷ ಅಮೆರಿಕಾ ಡಾಲರ್) ಗಳಿಕೆ ಮಾಡುವ ಮೂಲಕ ಶೀತಲೀಕೃತ ಸಿಗಡಿಯು ಸಾಗರೋತ್ಪನ್ನ ರಫ್ತಿನಲ್ಲಿ ತನ್ನ ಮೊದಲ ಸ್ಥಾನ ಉಳಿಸಿಕೊಂಡಿದ್ದು, ಪ್ರಮಾಣದ ಲೆಕ್ಕದಲ್ಲಿ ಅದರ ಪಾಲು ಶೇ. 40.98ರಷ್ಟಿದ್ದರೆ, ಒಟ್ಟು ಅಮೆರಿಕಾ ಡಾಲರ್ ಗಳಿಕೆಯ ಲೆಕ್ಕದಲ್ಲಿ ಶೇ. 67.72 ಇದೆ. ಈ ಅವಧಿಯಲ್ಲಿ ಸೀಗಡಿ ರಫ್ತಿನ ರೂಪಾಯಿ ಮೌಲ್ಯವು ಶೇ. 1.01ರಷ್ಟು ಏರಿಕೆಯಾಗಿದೆ.
2022-23ನೇ ಸಾಲಿನಲ್ಲಿನ ಶೀತಲೀಕೃತ ಸೀಗಡಿಯ ರಫ್ತು ಪ್ರಮಾಣವು 7,11,099 ದಶಲಕ್ಷ ಟನ್ ತಲುಪಿದೆ. ಬಹುದೊಡ್ಡ ಆಮದು ಮಾರುಕಟ್ಟೆಯಾದ ಅಮೆರಿಕಾವು 2,75,662 ಟನ್ ಶೀತಲೀಕೃತ ಸೀಗಡಿಯನ್ನು ಆಮದು ಮಾಡಿಕೊಂಡಿದ್ದರೆ, ಚೀನಾ, ಯೂರೋಪ್ ಒಕ್ಕೂಟ, ಆಗ್ನೇಯ ಏಶ್ಯಾ, ಜಪಾನ್ ಹಾಗೂ ಮಧ್ಯಪ್ರಾಚ್ಯ ದೇಶಗಳು ಕ್ರಮವಾಗಿ 1,45,743 ಟನ್, 95,377 ಟನ್, 65,466 ಟನ್, 40,975 ಟನ್ ಹಾಗೂ 31,647 ಟನ್ ಆಮದು ಮಾಡಿಕೊಳ್ಳುವ ಮೂಲಕ ನಂತರದ ಸ್ಥಾನದಲ್ಲಿವೆ.
ಭಾರತದಿಂದ ಜಪಾನ್‌ಗೆ ರಫ್ತಾಗುವ ಸಾಗರೋತ್ಪನ್ನಗಳ ಪೈಕಿ ಸಿಗಡಿ ಪ್ರಮುಖ ಉತ್ಪನ್ನವಾಗಿಯೇ ಮುಂದುವರಿದಿದ್ದು, ಅದರ ಪಾಲು ಶೇ. 71.35ರಷ್ಟಿದ್ದರೆ, ಅಮೆರಿಕಾ ಡಾಲರ್ ಮೌಲ್ಯದ ಲೆಕ್ಕದಲ್ಲಿ ಶೇ. 5.26ರಷ್ಟು ಬೆಳವಣಿಗೆಯಾಗಿದೆ. ಈ ಮಾರುಕಟ್ಟೆಯು ಪ್ರಮಾಣದ ಲೆಕ್ಕದಲ್ಲಿ ಶೇ. 32.95ರಷ್ಟು, ರೂಪಾಯಿ ಮೌಲ್ಯದ ಲೆಕ್ಕದಲ್ಲಿ ಶೇ. 17.33ರಷ್ಟು ಹಾಗೂ ಅಮೆರಿಕಾ ಡಾಲರ್ ಮೌಲ್ಯದ ಲೆಕ್ಕದಲ್ಲಿ ಶೇ. 9.09ರಷ್ಟು ಬೆಳವಣಿಗೆ ದಾಖಲಿಸಿದೆ.







