ಸಂಸತ್ತಿನಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಲೈಂಗಿಕ ಕಿರುಕುಳ:ಆಸ್ಟ್ರೇಲಿಯಾ ಸಂಸದೆ ಲಿಡಿಯಾ ಥೋರ್ಪೆ ಆರೋಪ

ಅಡಿಲೇಡ್: ತಾನು ಸಂಸತ್ತಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು ಸಂಸತ್ಭವನ ಮಹಿಳೆಯರಿಗೆ ಕಾರ್ಯನಿರ್ವಹಿಸಲು ಸುರಕ್ಷಿತ ಸ್ಥಳವಲ್ಲ ಎಂದು ಆಸ್ಟ್ರೇಲಿಯಾದ ಸಂಸದೆ ಲಿಡಿಯಾ ಥೋರ್ಪೆ ಗುರುವಾರ ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ಕಣ್ಣೀರಿಟ್ಟ ಲಿಡಿಯಾ, ಓರ್ವ ಪ್ರಭಾವೀ ಪುರುಷ ತನ್ನ ವಿರುದ್ಧ ಲೈಂಗಿಕ ಪದ ಬಳಸಿ ಟೀಕಿಸಿದ್ದಲ್ಲದೆ ಅನುಚಿತವಾಗಿ ಸ್ಪರ್ಷಿಸಿದ್ದಾರೆ ಮತ್ತು ಪ್ರಸ್ತಾವ ಮುಂದಿರಿಸಿದ್ದಾರೆ ಎಂದು ಆರೋಪಿಸಿದರು. ಕನ್ಸರ್ವೇಟಿವ್ ಪಕ್ಷದ ಸಂಸದ ಡೇವಿಡ್ ವ್ಯಾನ್ ವಿರುದ್ಧ ಲಿಡಿಯಾ ಈ ಆರೋಪ ಮಾಡಿದ್ದು ಅದನ್ನು ಡೇವಿಡ್ ನಿರಾಕರಿಸಿದ್ದಾರೆ. ಈ ಆರೋಪಗಳಿಂದ ಜರ್ಝರಿತಗೊಂಡಿದ್ದು ಇದು ಸಂಪೂರ್ಣ ಸುಳ್ಳು ಹೇಳಿಕೆ ಎಂದು ಡೇವಿಡ್ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ತನ್ನ ಸಹವರ್ತಿ ಸೆನೆಟರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಲಿಡಿಯಾ ಬುಧವಾರ ಆರೋಪಿಸಿದ್ದರು. ಆದರೆ ಸಂಸತ್ತಿನ ನಿರ್ಬಂಧದ ಬೆದರಿಕೆಯ ಅಡಿಯಲ್ಲಿ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು. ಆದರೆ ಗುರುವಾರ ಸಂಸತ್ತಿನ ಎದುರು ತನ್ನ ಹೇಳಿಕೆಯನ್ನು ಲಿಡಿಯಾ ಥೋರ್ಪೆ ಪುನರುಚ್ಚರಿಸಿದ್ದಾರೆ ಎಂದು ವರದಿಯಾಗಿದೆ.