ಉತ್ತರಕಾಶಿಯಲ್ಲಿ ಕೋಮು ಉದ್ವಿಗ್ನ ಸ್ಥಿತಿ: ‘ಶಾಂತಿ ಕಾಪಾಡುವುದು ರಾಜ್ಯದ ಕರ್ತವ್ಯ’ ಎಂದ ಹೈಕೋರ್ಟ್

ಡೆಹ್ರಾಡೂನ್: ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವುದು ರಾಜ್ಯ ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಎಂದು ಗುರುವಾರ ಉತ್ತರಾಖಂಡ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಉತ್ತರಕಾಶಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪುಗಳಿಗೆ ಮಹಾಪಂಚಾಯತ್ ಅಥವಾ ಸಮ್ಮೇಳನ ನಡೆಸಲು ಅನುಮತಿ ನೀಡುವುದನ್ನು ತಡೆ ಹಿಡಿಯಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಹೀಗೆ ಅಭಿಪ್ರಾಯ ಪಟ್ಟಿದೆ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ಒಂದು ವಾರದಿಂದ ಕೋಮು ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿರುವ ಉತ್ತರಕಾಶಿ ಜಿಲ್ಲೆಯ ಪುರೋಲಾದಲ್ಲಿ ಸಮ್ಮೇಳನ ನಿಗದಿಯಾಗಿದೆ. ಹಿಂದೂ ಯುವತಿಯೊಬ್ಬಳ ಅಪಹರಣಕ್ಕೆ ಇಬ್ಬರು ವ್ಯಕ್ತಿಗಳು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಬೆನ್ನಿಗೇ, ಅಂಗಡಿಗಳನ್ನು ಮುಚ್ಚುವಂತೆ ಮುಸ್ಲಿಂ ವರ್ತಕರಿಗೆ ಬೆದರಿಕೆ ಹಾಕಿರುವ ಹಿಂದುತ್ವವಾದಿ ಗುಂಪುಗಳು, ಗುರುವಾರದೊಳಗೆ ಉತ್ತರಾಖಂಡ ತೊರೆಯಬೇಕು ಎಂದು ಎಚ್ಚರಿಕೆಯನ್ನೂ ನೀಡಿವೆ.
ಅಪಹರಣ ಪ್ರಯತ್ನದ ಆರೋಪ ಕೇಳಿ ಬಂದ ಮರುದಿನವೇ ಅಪಹರಣ ಆರೋಪಿಗಳಾದ ಉಬೇದ್ ಖಾನ್ (24) ಹಾಗೂ ಜಿತೇಂದರ್ ಸೈನಿ (23) ಎಂಬ ಯುವಕರನ್ನು ಮೇ 27ರಂದು ಬಂಧಿಸಲಾಗಿತ್ತು.
ಈ ಅಪಹರಣ ಪ್ರಯತ್ನವು ಲವ್ ಜಿಹಾದ್ ಪ್ರಕರಣ ಎಂಬುದು ಹಿಂದುತ್ವವಾದಿ ಗುಂಪುಗಳ ಆರೋಪವಾಗಿದೆ.
ಈ ನಡುವೆ, ಸಮ್ಮೇಳನ ನಡೆಸುವುದಕ್ಕೆ ಹಿಂದುತ್ವವಾದಿ ಗುಂಪುಗಳಿಗೆ ಮಂಗಳವಾರ ಉತ್ತರಕಾಶಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಉದ್ದೇಶಿತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ರಾಜ್ಯ ಸರ್ಕಾರವು ಉತ್ತರಾಖಂಡ ಹೈಕೋರ್ಟ್‌ಗೆ ತಿಳಿಸಿದೆ.
ನ್ಯಾ. ವಿಪಿನ್ ಸಂಘಿ ಹಾಗೂ ನ್ಯಾ. ರಾಕೇಶ್ ತಪ್ಲಿಯಾರ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು ಉತ್ತರಕಾಶಿಯಲ್ಲಿನ ಬೆಳವಣಿಗೆಗಳ ಕುರಿತು ಮೂರು ವಾರಗಳೊಳಗಾಗಿ ವಿವರವಾದ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ, ಪ್ರಕರಣದಲ್ಲಿನ ಉಭಯ ಅರ್ಜಿದಾರರಿಗೂ ಸಾಮಾಜಿಕ ಮಾಧ್ಯಮ ಹಾಗೂ ಸುದ್ದಿವಾಹಿನಿಗಳಲ್ಲಿನ ಚರ್ಚೆಗಳಲ್ಲಿ ಭಾಗವಹಿಸದಂತೆ ಸೂಚಿಸಿದೆ.







