ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ವಾಪಸ್: ಸಚಿವ ಮಧು ಬಂಗಾರಪ್ಪ
'ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ'

ಬೆಂಗಳೂರು, ಜೂ.15: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕೇಶವ್ ಬಲಿರಾಮ್ ಹೆಡಗೇವಾರ್, ಸಾವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ ಕುರಿತಾದ ಪಠ್ಯ ತೆಗೆದು ಹಾಕಿದ್ದು, ಬದಲಾಗಿ ಸಾವಿತ್ರಿ ಬಾಯಿ ಫುಲೆ, ನೀ ಹೋದ ಮರು ದಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗೆಗಿನ ಕವಿತೆ. ಮಗಳಿಗೆ ಬರೆದ ಪತ್ರ ಎಂಬ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪಠ್ಯವನ್ನು ಸೇರಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಪಠ್ಯಪುಸ್ತಕಗಳು ಆಯಾ ಶಾಲಾ ಮಕ್ಕಳಿಗೆ ತಲುಪಿವೆ. ಅಲ್ಲದೆ, ಇದಕ್ಕೆ ಈಗಾಗಲೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಹೀಗಾಗಿ ಮತ್ತೊಮ್ಮೆ ಪ್ರಿಂಟ್ ಮಾಡುವುದು ಕಷ್ಟ. ಪರಿಷ್ಕರಣೆ ವೇಳೆ ಮಕ್ಕಳಿಗೆ ಅವಶ್ಯಕತೆ ಇಲ್ಲದ ಹಾಗೂ ತಪ್ಪು ತಿಳುವಳಿಕೆ ಮೂಡಿಸುವ ವಿಚಾರಗಳನ್ನು ತೆಗೆಯಲಾಗಿದೆ. ಇದಕ್ಕಾಗಿ ಕೇವಲ 5 ಜನರ ಸಮಿತಿ ಮಾಡಲಾಗಿತ್ತು ಎಂದರು.
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ರದ್ದು: ಸಚಿವ ಸಂಪುಟ ಸಭೆ ನಿರ್ಧಾರ
ಈ ಹಿಂದೆ ಇದ್ದ ಸಾವಿತ್ರಿ ಪುಲೆ ಅವರ ವಿಷಯವನ್ನು ತೆಗೆಯಲಾಗಿತ್ತು, ಅದನ್ನು ಮರಳಿ ಸೇರಿಸಲಾಗಿದೆ. ನೀ ಹೋದ ಮರು ದಿನ ಅಂಬೇಡ್ಕರ್ ಅವರ ಬಗೆಗಿನ ಕವಿತೆ, ಮಗಳಿಗೆ ಬರೆದ ಪತ್ರ ಎಂಬ ನೆಹರೂ ಅವರದ್ದನ್ನೂ ಸಹ ಮರಳಿ ಸೇರಿಲಾಗುತ್ತಿದೆ. ಹೆಡ್ಗೇವಾರ್, ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಕುರಿತಾದ ಪಠ್ಯ ತೆಗೆದು ಹಾಕಿದ್ದೇವೆ ಎಂದು ಅವರು ಉಲ್ಲೇಖಿಸಿದರು.
ಇನ್ನೂ, ಸಾಹಿತಿಗಳೆಲ್ಲ ಈ ಬಗ್ಗೆ ಹೇಳಿದಾಗ ಈ ಹಿಂದಿನ ಪಠ್ಯದಲ್ಲಿದ್ದ ವಿಚಾರಗಳ ಕುರಿತಂತೆ 45 ಬದಲಾವಣೆಗಳನ್ನು ಮಾಡಲು ಯೋಚಿಸಲಾಗಿತ್ತು. ಪದಗಳು, ವಾಕ್ಯಗಳ ಬದಲಾವಣೆ ಹಾಗೂ ಪಠ್ಯ ಬಗ್ಗೆ ಬದಲಾವಣೆ ಮಾಡುವ ಅಗತ್ಯವಿತ್ತು. ಹೀಗಾಗಿ ಈ ಬಾರಿ 6ರಿಂದ 10ನೆ ತರಗತಿಯವರೆಗೆ ಸಪ್ಲಿಮೆಂಟರಿ ಪುಸ್ತಕ ಕೊಡುವ ಬಗ್ಗೆ ಸಂಪುಟವು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಒಂದು ಒಳ್ಳೆಯ ಸಮಿತಿ ರಚನೆ ಮಾಡುವಂತೆಯೂ ಮುಖ್ಯಮಂತ್ರಿ ಸೂಚನೆ ನೀಡಿದ್ದು, ಅದರಂತೆ ಶೀಘ್ರದಲ್ಲಿಯೇ ಹೊಸ ಸಮಿತಿಯನ್ನು ರಚಿಸಿ ಮಕ್ಕಳ ಭವಿಷ್ಯಕ್ಕೆ ಉತ್ತಮವಾಗಿರುವ ಪಠ್ಯ ಮಾಡಲಾಗುವುದು ಎಂದು ಸಚಿವರು ನುಡಿದರು.







