ಮಳೆ ಬಾರದಿದ್ದರೂ ಸೌಕೂರು-ಕುದ್ರು ಪರಿಸರದಲ್ಲಿ ನೆರೆ !
► 50-60 ಎಕರೆ ಕೃಷಿಭೂಮಿ ಮುಳುಗಡೆ ►ಹಲವು ಮನೆಗಳಿಗೆ ನುಗ್ಗಿದ ನೀರು

ಬೈಂದೂರು, ಜೂ.15: ಜೂನ್ ತಿಂಗಳಿನ ಎರಡು ವಾರ ಕಳೆದರೂ ನಿರೀಕ್ಷಿತ ಮುಂಗಾರು ಮಳೆ ಬಂದಿಲ್ಲ. ಕೆಲವೆಡೆ ಕುಡಿಯುವ ನೀರಿಗೆ ಈಗಲೂ ತಾತ್ವಾರ ಇದೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಸೌಕೂರು-ಕುದ್ರು ಪರಿಸರದಲ್ಲಿ ಮಳೆ ಇಲ್ಲದೆಯೂ ನೆರೆ ಸೃಷ್ಟಿಯಾಗಿದೆ. ಗುಲ್ವಾಡಿ ಡ್ಯಾಂ ನೀರು ಸಮೀಪದ ಮನೆ, ತೋಟ, ಕೃಷಿಭೂಮಿಗಳಿಗೆ ನುಗ್ಗಿ ವ್ಯಾಪಕ ಹಾನಿ ಉಂಟು ಮಾಡಿದೆ.
ಗುಲ್ವಾಡಿಯಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಿಸಿದ್ದು, ಇಲ್ಲಿನ ಹಿನ್ನೀರು ಪರಿಸರದ ಕೃಷಿಭೂಮಿಗಳು, ಮನೆ, ತೋಟಗಳಿಗೆ ನುಗ್ಗಿ ಆವಾಂತರ ಎಬ್ಬಿಸಿದೆ. ಸುಮಾರು 50-60 ಎಕರೆ ಕೃಷಿಭೂಮಿಯಲ್ಲಿ ಮೊಣ ಕಾಲೆತ್ತರಕ್ಕೆ ನದಿ ನೀರು ತುಂಬಿದೆ. ಮುಂಗಾರು ನಿರೀಕ್ಷೆಯಲ್ಲಿ ಕೃಷಿಕರು ಸಾಗುವಳಿ ಮಾಡಲು ಉಳುಮೆ ಮಾಡಿ ಹಾಕಿದ್ದ ಗೊಬ್ಬರ ಸಂಪೂರ್ಣ ನಾಶವಾಗಿದೆ.
ಇನ್ನು ಒಂದಷ್ಟು ಗದ್ದೆಗಳಿಗೆ ಬಿತ್ತನೆ ಬೀಜ ಹಾಕಿದ್ದು ಅದು ಕೂಡ ಕೊಳೆತು ಹೋಗಿದೆ. ಗೊನ್ನರ, ಬಿತ್ತನೆ ಬೀಜ ಸೇರಿ ಇಲ್ಲಿನ ರೈತರಿಗೆ ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು ದೂರಲಾಗಿದೆ. ಈ ಪ್ರದೇಶದ ನಿವಾಸಿ ಗಳಾದ ಸುಜಾತಾ, ಅಣ್ಣಯ್ಯ ಪೂಜಾರಿ, ಬಾಬು ಶೇರಿಗಾರ್, ಚಿಕ್ಕ ನಾಯ್ಕ, ಸದಿಯಮ್ಮ ಎನ್ನುವರ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಈ ಭಾಗದಲ್ಲಿ ಹತ್ತಾರು ಎಕರೆ ಅಡಿಕೆ, ತೆಂಗು ಹಾಗೂ ಬಾಳೆ ತೋಟಕ್ಕೂ ಹಾನಿಯಾಗಿದೆ.
ಈ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಲೇ ಸಂಸದ ಬಿ.ವೈ ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಗುಲ್ವಾಡಿ ಗ್ರಾಪಂ ಅಧ್ಯಕ್ಷ ಸುಧೀಶ್ ಕುಮಾರ್ ಶೆಟ್ಟಿ ಸಂಬಂದಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು ಗುರುವಾರ ಮಧ್ಯಾಹ್ನದ ತನಕ ಡ್ಯಾಂನ ಒಂದು ಗೇಟು ತೆರೆಯಲಾಗಿತ್ತು. ಆದರೆ ಪರಿಸರಕ್ಕೆ ನುಗ್ಗಿದ ನೀರು ಇಳಿಯಲು 2-3 ಗೇಟ್ ತೆರೆಯಬೇಕೆಂಬುದು ಸ್ಥಳೀಯರ ಅಭಿಪ್ರಾಯ.
‘ಈ ಹಿಂದೆ ಭತ್ತ ಕೃಷಿಯ ನಂತರ ಉಪಬೆಳೆ ಹಾಗೂ ಕಲ್ಲಂಗಡಿ ಬೆಳೆಯುತ್ತಿದ್ದೆವು. ಆದರೆ ಪ್ರತಿವರ್ಷ ಡ್ಯಾಂ ನೀರು ಬಿಡುವ ಗೊಂದಲದಲ್ಲಿ ಕೃಷಿಭೂಮಿಗೆ ನೀರು ನುಗ್ಗುತ್ತಿದ್ದು ಅದನ್ನು ಕೈಬಿಟ್ಟೆವು. ಆದರೆ ಈ ಬಾರಿ ಭತ್ತ ಕೃಷಿಗೆ ಹಾನಿಯಾಗಿದೆ. ನಾಲ್ಕಾರು ದಿನದಿಂದ ಕೃಷಿಭೂಮಿ, ತೋಟ, ಮನೆ ಸಮೀಪ ನೀರು ನಿಲ್ಲುವುದರಿಂದ ಸೊಳ್ಳೆ ಕಾಟ ಹೆಚ್ಚಿದೆ. ಸಂಬಂದಪಟ್ಟ ಇಲಾಖೆ ಹಾಗೂ ಸರಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ರಾದ ಶ್ರೀನಿವಾಸ ಶೇರುಗಾರ್ ಗುಲ್ವಾಡಿ ಒತ್ತಾಯಿಸಿದ್ದಾರೆ.
ಡ್ಯಾಂ ಸಮೀಪದಲ್ಲಿ ಮಾಡಬೇಕಾಗಿದ್ದ ತಡೆಗೋಡೆ ಮುಂದುವರೆಸಿದ ಕಾರಣ ಈ ಭಾಗದ ಜನರಿಗೆ ಸಮಸ್ಯೆ ಆಗುತ್ತಿದೆ. ಇದರಿಂದ ಬೆಳೆ ನಾಶವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಕೃಷಿಕ ನಾರಾಯಣ ಮೊಗವೀರ ಆಗ್ರಹಿಸಿದ್ದಾರೆ.
"ಸೌಕೂರು-ಕುದ್ರು ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯ. ಹೊಳೆ ದಂಡೆ ನಿರ್ಮಾಣ, ಹೈಡ್ರಾಲಿಕ್ ಗೇಟು ಆಗಬೇಕಾಗಿದೆ. ನೀರು ಹರಿಯಲು ಕಾಲುವೆಯಂತಹ ಮಾರ್ಗ ನಿರ್ಮಿಸಬೇಕು. ಸ್ಥಳೀಯ ಜನರಿಗೆ ಆಗುತ್ತಿರುವ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಬೇಕು".
-ಸುರೇಂದ್ರ ಶೆಟ್ಟಿ ಗುಲ್ವಾಡಿ, ಸದಸ್ಯರು, ಗ್ರಾಪಂ
"ಕುಂದಾಪುರ ಪುರಸಭೆಗೆ ಸರಬರಾಜಾಗುವ ಕುಡಿಯುವ ನೀರಿಗೆ ಉಪ್ಪು ನೀರು ಸೇರಿದ ಬಗ್ಗೆ ಡ್ಯಾಂ ಗೇಟ್ ತೆಗೆದ ವಿಚಾರ ಎಂಬಂತೆ ಗೊಂದಲಗಳು ಉಂಟಾಗಿತ್ತು. ಅದರಂತೆಯೇ ಗೇಟುಗಳನ್ನು ಮುಚ್ಚಿದ್ದರಿಂದ ಹಿನ್ನೀರು ಸ್ಥಳೀಯವಾಗಿ ನುಗ್ಗಿದ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಒಂದು ಗೇಟು ತೆಗೆದು ನೀರು ಹರಿಸಿದ್ದೇವೆ. ಸ್ಥಳೀಯ ಜನರ ಸುರಕ್ಷತೆ ಹಾಗೂ ಆಸ್ತಿ ಪಾಸ್ತಿ ಹಿತದೃಷ್ಟಿ ಯಿಂದ ಡ್ಯಾಂನಲ್ಲಿ ನೀರಿನಮಟ್ಟ ನೋಡಿಕೊಂಡು ಅಗತ್ಯ ಕ್ರಮಕೈಗೊಳ್ಳುತ್ತೇವೆ. ಸುಮಾರು 14 ವರ್ಷಗಳಿಂದ ಗುಲ್ವಾಡಿ ಡ್ಯಾಂ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಸಮಸ್ಯೆಯಾಗಿಲ್ಲ. ತಾಂತ್ರಿಕವಾಗಿ ಎಲ್ಲವನ್ನೂ ನಿರ್ವಹಿಸುತ್ತಿದ್ದೇವೆ".
-ದಾಸೇಗೌಡ, ಕಾರ್ಯಪಾಲಕ ಇಂಜಿನಿಯರ್, ವಾರಾಹಿ ಯೋಜನೆ ವಿಭಾಗ ಸಿದ್ದಾಪುರ.


