ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ಗ್ಯಾರಂಟಿ: ಮಾಜಿ ಸಚಿವ ಸುನೀಲ್‍ಕುಮಾರ್ ಟೀಕೆ

ಬೆಂಗಳೂರು, ಜೂ.15: ಉಚಿತ ಯೋಜನೆಗಳ ಜಾರಿಯ ಭರಾಟೆಯಲ್ಲಿ ಮುಳುಗಿರುವ ಸಿದ್ದರಾಮಯ್ಯ ಸರಕಾರ ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ. ಉಚಿತ ಉಚಿತ ಎಂಬ ನಿಮ್ಮ ಭಾಷಣದ ಭರಾಟೆಗೆ ಮರುಳಾದ ಜನರಿಗೆ ಈಗ ಕತ್ತಲೆ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ ಎಂಬುದು ತಿಂಗಳು ಕಳೆಯುವಷ್ಟರಲ್ಲೇ ಅರಿವಾಗಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರೈತರ ಐಪಿ ಸೆಟ್ ಗಳಿಗೆ ನಿರಂತರ ಏಳು ಗಂಟೆಗಳ ಕಾಲ ಪೂರೈಕೆ ಮಾಡುತ್ತಿದ್ದ ವಿದ್ಯುತ್ ಕಡಿತಗೊಳಿಸಲಾಗಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನಿಯಮಿತ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ. ನಿರ್ವಹಣೆ ಹೆಸರಿನಲ್ಲಿ ಪವರ್ ಕಟ್ ಕಣ್ಣಾಮುಚ್ಚಾಲೆ ನಡೆಸುತ್ತಿರುವುದು ಸುಳ್ಳೇ ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರೆ ವ್ಯವಸ್ಥೆಯನ್ನು ಎತ್ತ ಕೊಂಡೊಯ್ಯುತ್ತಿದ್ದೀರಿ? ನಿಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಜಾಹೀರಾತು ಕೊಟ್ಟ ಮಾತ್ರಕ್ಕೆ ಕತ್ತಲೆ ಕಳೆಯಲು ಸಾಧ್ಯವೇ ? ನೀವು ಘೋಷಣೆ ಇಲ್ಲದೆ ಮಾಡುತ್ತಿರುವ ಲೋಡ್ ಶೆಡ್ಡಿಂಗ್ ನಿಂದ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕುಂಠಿತಗೊಳ್ಳುವುದರಲ್ಲಿ ಅನುಮಾನ ಇಲ್ಲ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಉಚಿತ ಯೋಜನೆಗಳ ಜಾರಿಯ ಭರಾಟೆಯಲ್ಲಿ ಮುಳುಗಿರುವ @siddaramaiah ಸರ್ಕಾರ ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ !
— Sunil Kumar Karkala (@karkalasunil) June 15, 2023
ಉಚಿತ ಉಚಿತ ಎಂಬ ನಿಮ್ಮ ಭಾಷಣದ ಭರಾಟೆಗೆ ಮರುಳಾದ ಜನರಿಗೆ ಈಗ ಕತ್ತಲೆ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ ಎಂಬುದು ತಿಂಗಳು ಕಳೆಯುವಷ್ಟರಲ್ಲೇ ಅರಿವಾಗಿದೆ. (1/3)







