ಶಾಹೀನ್ ಸಂಸ್ಥೆಗೆ ಹಾಗೆ, ವಿವೇಕಾನಂದ ಕಾಲೇಜಿಗೆ ಹೀಗಾ?
ದ್ವೇಷ ಹರಡುವ, ಅಪರಾಧ ವೈಭವೀಕರಿಸುವ ಕಾರ್ಯಕ್ರಮ ಮಾಡಿದ ವಿವೇಕಾನಂದ ಕಾಲೇಜು

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ನಾಟಕ ಪ್ರದರ್ಶನವೊಂದಕ್ಕೆ ಸಂಬಂಧಿಸಿ ಬೀದರಿನ ಶಾಹೀನ್ ಶಾಲಾ ಆಡಳಿತದ ವಿರುದ್ಧ ಹೊರಿಸಲಾಗಿದ್ದ ದೇಶದ್ರೋಹ ಆರೋಪವನ್ನು ಕರ್ನಾಟಕ ಹೈಕೋರ್ಟಿನ ಕಲಬುರಗಿ ಪೀಠವು ಬುಧವಾರ ವಜಾ ಮಾಡಿದೆ. ಶಾಹೀನ್ ಶಾಲಾಡಳಿತದ ಪರ ವಕೀಲ ಅಮಿತ್ ಕುಮಾರ್ ದೇಶಪಾಂಡೆ ಅವರ ವಾದವನ್ನು ಆಲಿಸಿದ ನಂತರ ಜಸ್ಟಿಸ್ ಹೇಮಂತ್ ಚಂದನ್‌ಗೌಡರ್ ಪ್ರಕರಣವನ್ನು ವಜಾಗೊಳಿಸಿದ್ದಾರೆ.
ಜನವರಿ 2020ರಲ್ಲಿ ಬೀದರಿನ ಶಾಹೀನ್ ಶಾಲೆಯ ನಾಲ್ಕು, ಐದು ಹಾಗು ಆರನೇ ತರಗತಿ ವಿದ್ಯಾರ್ಥಿಗಳು ಸಿಎಎ ವಿರೋಧಿ ಕಥಾವಸ್ತು ಹೊಂದಿದ ನಾಟಕ ಪ್ರದರ್ಶಿಸಿದ ನಂತರ ಶಾಲಾಡಳಿತದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಈ ನಾಟಕದಲ್ಲಿ ಮೋದಿ ವಿರೋಧಿ ಘೋಷಣೆಗಳು ಮತ್ತು ಮತೀಯ ನಿಂದನೆ ಪದಗಳಿದ್ದವು ಎಂದು ಆರೋಪಿಸಲಾಗಿತ್ತು.

ಬೀದರ್ ಪೊಲೀಸರು ನೀಲೇಶ್ ಎಂಬವರ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 504, 505(2), 124(ಎ), 153(ಎ) ಅನ್ವಯ ಪ್ರಕರಣ ದಾಖಲಿಸಿದ್ದರು. ಶಾಲಾ ಆಡಳಿತ ಮಂಡಳಿಯನ್ನು ಮಾತ್ರವಲ್ಲದೆ ನಾಲ್ಕು, ಐದು , ಆರನೇ ಕ್ಲಾಸಿನ ಮಕ್ಕಳನ್ನು ಹಾಗು ಅವರ ಪೋಷಕರನ್ನು ಕ್ರಿಮಿನಲ್ ಗಳಂತೆ ಅಂದು ನಡೆಸಿಕೊಳ್ಳಲಾಗಿತ್ತು. ಒಬ್ಬ ಬಾಲಕಿಯ ತಾಯಿ ಹಾಗು ಒಬ್ಬ ಶಿಕ್ಷಕಿಯನ್ನು ಬಂಧಿಸಿ ಎರಡು ವಾರ ಜೈಲಲ್ಲಿಡಲಾಯಿತು. ಬಳಿಕ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲು ಕಾರಣಗಳಿಲ್ಲ ಎಂದು ನ್ಯಾಯಾಲಯ ಜಾಮೀನು ನೀಡಿತ್ತು. ಸಶಸ್ತ್ರ ಪೊಲೀಸರು ಪೊಲೀಸ್ ಸಮವಸ್ತ್ರದಲ್ಲೇ ಶಾಲಾ ಮಕ್ಕಳನ್ನು ಶಾಲೆಯಲ್ಲಿ ವಿಚಾರಣೆ ನಡೆಸಿದ್ದರು. ಇದು ಕಾನೂನಿಗೆ ವಿರುದ್ಧವಾಗಿತ್ತು. ಮಕ್ಕಳನ್ನು ಹಾಗೆ ವಿಚಾರಣೆಗೆ ಒಳಪಡಿಸುವಂತಿರಲಿಲ್ಲ. ಯಾವುದೊ ದೊಡ್ಡ ಅಪರಾಧ ಆಗಿದೆ ಎಂಬಂತೆ ಬೀದರ್ ಠಾಣೆಯ ಇನ್ಸ್ ಪೆಕ್ಟರ್ ಬಸವೇಶ್ವರ್ ಅವರು ಶಾಹೀನ್ ಶಾಲೆಗೆ ಐದು ಬಾರಿ ಹೋಗಿ ಅಲ್ಲಿನ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದನ್ನು ಅಲ್ಲೇ ಇದ್ದ ನ್ಯೂಸ್ ಮಿನಿಟ್ ಪತ್ರಕರ್ತ ವರದಿ ಮಾಡಿದ್ದರು. ತಮ್ಮ ಅಧಿಕಾರಿಗಳು ವಿಚಾರಣೆ ಮಾಡುವಾಗ ತಪ್ಪು ಮಾಡಿದ್ದಾರೆ ಎಂದು ಮತ್ತೆ ಪೊಲೀಸ್ ಇಲಾಖೆಯೇ ಒಪ್ಪಿಕೊಂಡಿತು.

ಚಿತ್ರ- thenewsminute [ಮಕ್ಕಳನ್ನು ವಿಚಾರಣೆ ನಡೆಸುತ್ತಿರುವ ಅಧಿಕಾರಿ]
ಈ ಬಗ್ಗೆ ಹಾಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಆಗಸ್ಟ್ 2021 ರಲ್ಲಿ
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅಭಯ್ ಓಕಾ ಹಾಗು ನ್ಯಾಯಮೂರ್ತಿ ಸಂಜಯ್ ಗೌಡ ಅವರ ಪೀಠ ಕೂಡ ಶಾಲೆಯಲ್ಲಿ ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳ ವಿಚಾರಣೆ ಮಾಡುವಾಗ ಪೊಲೀಸರು ಸಮವಸ್ತ್ರದಲ್ಲಿ ಸಶಸ್ತ್ರಧಾರಿಗಳಾಗಿ ಇದ್ದಿದ್ದು ಕಾನೂನಿನ ಗಂಭೀರ ಉಲ್ಲಂಘನೆ ಎಂದು ಹೇಳಿದ್ದರು.
[ನಯನಾ ಮೋಟಮ್ಮ- ಮೂಡಿಗೆರೆ ಶಾಸಕಿ]
ಈಗ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧದ ದೇಶದ್ರೋಹದ ಪ್ರಕರಣ ರದ್ದಾಗಿದೆ. ಆದರೆ ಜಾತಿ ಮತ ಭೇದವಿಲ್ಲದೆ ಬೀದರ್ ನಂತಹ ಜಿಲ್ಲೆಯಲ್ಲಿ ಸಾವಿರಾರು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ರಾಜ್ಯೋತ್ಸವ ಪುರಸ್ಕೃತ ಶಾಹೀನ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ದೇಶದ್ರೋಹ ಆರೋಪದ ಹಣೆಪಟ್ಟಿ ಹೊತ್ತುಕೊಳ್ಳಬೇಕಾಯಿತು. ಕಲ್ಯಾಣ ಕರ್ನಾಟಕದ ಕೀರ್ತಿ ಬೆಳಗುತ್ತಿರುವ ಆ ಹೆಮ್ಮೆಯ ಶಿಕ್ಷಣ ಸಂಸ್ಥೆಗೆ ಇಂತಹ ಕಳಂಕ ಅಂಟಿಸಲು ಆಗ ಇಡೀ ವ್ಯವಸ್ಥೆ ಒಟ್ಟಾಗಿ ನಿಂತಿತು. ಸರಕಾರ, ಪೊಲೀಸ್ ವ್ಯವಸ್ಥೆ, ಜಿಲ್ಲಾಡಳಿತ ಎಲ್ಲರೂ ಅದರ ವಿರುದ್ಧ ಮುಗಿಬಿದ್ದರು. ಜನರಿಗೆ ಉತ್ತಮ ಶಿಕ್ಷಣ ಸಂಸ್ಥೆ, ಗುಣಮಟ್ಟದ ಶಿಕ್ಷಣ ನೀಡಲಾಗದ ಸರಕಾರ ಅತ್ಯುತ್ತಮ ಶಿಕ್ಷಣ ಸಂಸ್ಥೆಯೊಂದನ್ನು ತಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು.
ನಾಟಕದಲ್ಲಿ ಆಕ್ಷೇಪಾರ್ಹ ಅಂಶ ಇದ್ರೆ ಅದರ ವಿರುದ್ಧ ಕ್ರಮ ಕೈಗೊಳ್ಳದೇ ದೇಶದ್ರೋಹದಂತಹ ಗಂಭೀರ ಪ್ರಕರಣ ಹೇಗೆ ದಾಖಲಿಸುತ್ತೀರಿ ಎಂದು ಕೇಳುವ ಒಂದೇ ಒಂದು ಅಧಿಕಾರಿ, ಶಾಸಕರಾಗಲಿ, ಸಚಿವರಾಗಲಿ ಆ ಆಡಳಿತದಲ್ಲಿ ಇರಲಿಲ್ಲ. ಈ ಪ್ರಶ್ನೆ ಕೇಳ ಬೇಕಿದ್ದ ಕನ್ನಡದ ನ್ಯೂಸ್ ಚಾನಲ್ ಗಳು ಹಾಗು ಪ್ರಮುಖ ಪತ್ರಿಕೆಗಳು ಶಾಹೀನ್ ಸಂಸ್ಥೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟವು.
ಈಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ವಿವೇಕಾನಂದ ಸ್ವಾಯತ್ತ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಒಂದು ನೃತ್ಯ ರೂಪಕವನ್ನು ಪ್ರದರ್ಶಿಸಲಾಗಿದೆ. ಸುಮಾರು 24 ನಿಮಿಷಗಳ ಈ ನೃತ್ಯ ರೂಪಕ ಸಂಪೂರ್ಣವಾಗಿ ಸಂಘ ಪರಿವಾರದ, ಬಜರಂಗದಳದ ಭಾಷೆಯಲ್ಲೇ ಇದೆ.
ಬಾಬರಿ ಮಸೀದಿ ಧ್ವಂಸ, ರಾಮ ಮಂದಿರ ನಿರ್ಮಾಣ ಎಂಬ ಹೆಸರಲ್ಲೇ ಈ ಕಾರ್ಯಕ್ರಮದ ವಿಡಿಯೋ ಯೂಟ್ಯೂಬ್ ಚಾನಲ್ ಗಳಲ್ಲಿ ಅಪ್ಲೋಡ್ ಆಗಿದೆ. ಸಂಘ ಪರಿವಾರ ಹೇಳುವ ಇತಿಹಾಸವನ್ನೇ ಇಡೀ ನೃತ್ಯ ರೂಪಕದಲ್ಲಿ ಅಭಿನಯಿಸಿ ತೋರಿಸಲಾಗಿದೆ.
.jpeg)
ಬಾಬರ್ ಬಂದು ಅಯೋಧ್ಯೆಯ ರಾಮ ಮಂದಿರ ಕೆಡವಿದ ಎನ್ನುವ ಚಿತ್ರಣ, ಬ್ರಾಹ್ಮಣ ವೇಷಧಾರಿ ಬಂದು "ಗೋ ಹತ್ಯೆ ನಡೆಯುತ್ತಿದೆ, ಎಲ್ಲೆಡೆ ರಕ್ತವೇ ರಕ್ತ " ಎಂದು ಹೇಳುವ ಸನ್ನಿವೇಶ, ಬ್ರಾಹ್ಮಣ ವೇಷದಾರಿ " ಭಾರತದ ಪ್ರತಿ ಮನೆ ಮನೆಗಳಿಂದ ಧರ್ಮ ರಕ್ಷಕರು ಬಂದು ನಿನ್ನ ದರ್ಪದ ಪ್ರತಿರೂಪವಾದ ಈ ಮಸೀದಿಯನ್ನು ನುಚ್ಚು ನೂರು ಮಾಡಿ ಬಿಡುವರು" ಎಂದು ಹೇಳುವ ದ್ರಶ್ಯ, ಅಯೋಧ್ಯೆಗೆ ಕರಸೇವೆಗೆ ಹೋಗುವ ಆರೆಸ್ಸೆಸ್ ವೇಷಧಾರಿ " ನಾವು ಯುದ್ಧಕ್ಕೆ ಸನ್ನದ್ಧರಾಗಿದ್ದೇವೆ, ರಾಮನಿಗಾಗಿ ಜೀವ ಕೊಡಲು ಸಿದ್ಧ " ಎನ್ನುವ ದ್ರಶ್ಯ, ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ತೋರಿಸಿ " ಬಾಬರನ ದರ್ಪದ ಪ್ರತಿರೂಪದ ಅಕ್ರಮ ಕಟ್ಟಡ ರಾಮ ಭಕ್ತರ ಶೌರ್ಯಕ್ಕೆ ನುಚ್ಚುನೂರಾಯಿತು " ಎಂದು ಹೇಳುವ ದೃಶ್ಯ, ಕೊನೆಗೆ " ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿತು. ಹಿಂದುಗಳ ಹೋರಾಟಕ್ಕೆ ವಿಜಯ ಪ್ರಾಪ್ತಿಯಾಯಿತು " ಎಂದು ಹೇಳುವ ದೃಶ್ಯ, ಅಂತಿಮವಾಗಿ ಪ್ರಧಾನಿ ಮೋದಿ ಪಾತ್ರಧಾರಿ ಬಂದು ಹೊಸ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸುವ ದೃಶ್ಯ - ಇವೆಲ್ಲವೂ ಆ ದೃಶ್ಯ ರೂಪಕದಲ್ಲಿದೆ.

ಬಾಬರಿ ಮಸೀದಿ ಧ್ವಂಸ ಮಾಡಿದ್ದು ಕಾನೂನು ಉಲ್ಲಂಘನೆ ಎಂದು ಸುಪ್ರೀಂ ಕೋರ್ಟೇ ಹೇಳಿದೆ. ಈ ದೇಶದ ಪರಮೋಚ್ಚ ನ್ಯಾಯಾಲಯವೇ ಅದು ಅಪರಾಧ ಎಂದು ಹೇಳಿದ ಮೇಲೆ ಆ ಬಗ್ಗೆ ಯಾವುದೇ ಎರಡು ಅಭಿಪ್ರಾಯವಿಲ್ಲ. ಆದರೆ ಸುಪ್ರೀಂ ಕೋರ್ಟ್ ಅಪರಾಧ ಎಂದು ಹೇಳಿರುವ ಕೃತ್ಯವನ್ನೇ ವಿವೇಕಾನಂದ ಕಾಲೇಜಿನ ನೃತ್ಯ ರೂಪಕದಲ್ಲಿ ವೈಭವೀಕರಿಸಿ, ಅದನ್ನು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಂದ ಮಾಡಿಸಿ ತೋರಿಸಲಾಗಿದೆ. ಅಂತಹ ಅಪರಾಧ ಎಸಗಲು ಹೋಗುವುದನ್ನು ಯಾವುದೊ ದೇಶ ಸೇವೆಗೆ ಹೋಗುವಂತೆ ಚಿತ್ರಿಸಲಾಗಿದೆ. ಬಜರಂಗದಳದಂತಹ ಕ್ರಿಮಿನಲ್ ಸಂಘಟನೆಯನ್ನು ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುವ ಸಂಘಟನೆ ಎಂದು ಆ ವಿದ್ಯಾರ್ಥಿಗಳಿಂದಲೇ ಹೇಳಿಸಲಾಗಿದೆ. ಮುಸ್ಲಿಮರೆಂದರೆ ಮಸೀದಿ ಧ್ವಂಸ ಮಾಡುವವರು, ಗೋಹತ್ಯೆ ಮಾಡುವವರು ಎಂಬಂತೆ ಉದ್ದಕ್ಕೂ ಚಿತ್ರಿಸಲಾಗಿದೆ.
.jpeg)
ಯಾವ ದೃಷ್ಟಿಯಲ್ಲಿ ನೋಡಿದರೂ ಒಂದು ಶಿಕ್ಷಣ ಸಂಸ್ಥೆಯಲ್ಲಿ ತೋರಿಸಬೇಕಾದ ದೃಶ್ಯ ರೂಪಕ ಅದು ಅಲ್ಲವೇ ಅಲ್ಲ!
ವಿವೇಕಾನಂದ ಕಾಲೇಜನ್ನು ನಡೆಸುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣ ಭಟ್. ವಿವೇಕಾನಂದ ಕಾಲೇಜಿನ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಹಾಗು ಸಂಚಾಲಕ ಮುರಳಿಕೃಷ್ಣ ಕೆ ಎನ್. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರು ಪ್ರೊ. ವಿಷ್ಣು ಗಣಪತಿ ಭಟ್.
ಸುಪ್ರೀಂ ಕೋರ್ಟ್ ಅಪರಾಧ ಎಂದಿರುವ ಕೃತ್ಯವನ್ನೇ ಸಾಹಸ ಎಂದು ತೋರಿಸಿರುವ, ಹಿಂದೂ ಮುಸ್ಲಿಮರ ನಡುವೆ ದ್ವೇಷ, ಅನುಮಾನ ಸೃಷ್ಟಿಸುವ ಹಾಗು ಶಿಕ್ಷಣ ಸಂಸ್ಥೆಯಲ್ಲಿ ರಾಜಕೀಯ ತಂದಿರುವ ಈ ಘಟನೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದು ಎರಡು ದಿನಗಳಾಗಿವೆ.
.jpeg)
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಹಾಗು ಪ್ರಾಂಶುಪಾಲರ ವಿರುದ್ಧ ಪುತ್ತೂರಿನ ಪೊಲೀಸರು ಏನಾದರೂ ಕ್ರಮ ಕೈಗೊಂಡಿದ್ದಾರಾ ? ಘಟನೆಯ , ನೃತ್ಯ ರೂಪಕದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಯೂಟ್ಯೂಬ್ ಚಾನಲ್ ಗಳಲ್ಲಿ ಪ್ರಸಾರ ಆಗುತ್ತಿವೆ. ಅದರ ಆಧಾರದಲ್ಲಿ ವಿವೇಕಾನಂದ ಕಾಲೇಜಿನ ವಿರುದ್ಧ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರಾ ? ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಿ ಪೊಲೀಸರಿಗೆ ಏನಾದರೂ ಸೂಚನೆ ನೀಡಿದ್ದಾರೆಯೇ ? ಪುತ್ತೂರಿನ ಶಾಸಕ ಅಶೋಕ್ ರೈ ಈ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದಾರಾ ? ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ಇಂತಹ ದ್ವೇಷ ಹರಡುವ ಕಾರ್ಯಕ್ರಮ ಮಾಡಿಸಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಸರಕಾರ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆಯೇ ?
ಕೇಂದ್ರ ಸರಕಾರ ಹಾಗು ಪ್ರಧಾನಿಯನ್ನು ಟೀಕಿಸಿದ್ದಕ್ಕೆ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ದೇಶದ್ರೋಹದ ಪ್ರಕರಣವನ್ನೇ ದಾಖಲಿಸಲಾಯಿತು.
ಶಾಹೀನ್ ಇರಲಿ, ವಿವೇಕಾನಂದ ಕಾಲೇಜೇ ಇರಲಿ, ಯಾವ ಶಿಕ್ಷಣ ಸಂಸ್ಥೆಯ ವಿರುದ್ದವೂ ದೇಶದ್ರೋಹದ ಪ್ರಕರಣ ದಾಖಲಿಸುವಂತಹ ಅತಿರೇಕದ, ದುಷ್ಟ ಕ್ರಮ ಆಗಬಾರದು.
ಈಗ ಅಪರಾಧವನ್ನು ವೈಭವೀಕರಿಸಿದ್ದಕ್ಕೆ, ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಕ್ಕೆ, ಸಮಾಜದಲ್ಲಿ ದ್ವೇಷ ಹರಡಿದ್ದಕ್ಕೆ ವಿವೇಕಾನಂದ ಕಾಲೇಜಿನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೂಕ್ತ ಕಲಮ್ ಗಳಡಿ ಪ್ರಕರಣ ದಾಖಲಾಗುತ್ತದೆಯೇ ? ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿಚಾರಣೆ ನಡೆಯಲಿದೆಯೇ ? ಕಾನೂನು ಕ್ರಮ ಆಗಲಿದೆಯೇ ? ಈ ಸರಕಾರ ಬಂದ ಮೇಲಾದ್ರೂ ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮವಾಗಲಿದೆ ಎಂಬ ನಿರೀಕ್ಷೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರು ರಾಜ್ಯ ಸರಕಾರದ ಬಳಿ ಈ ಪ್ರಶ್ನೆ ಕೇಳುತ್ತಿದ್ದಾರೆ.







