ಮಂಗಳೂರು : ಮನೆಯೊಂದಕ್ಕೆ 7.71 ಲಕ್ಷ ರೂ. ವಿದ್ಯುತ್ ಬಿಲ್ !
"ಬಿಲ್‌ನಲ್ಲಿ ಲೋಪ ಕಂಡು ಬಂದರೆ ಗ್ರಾಹಕರಿಗೆ ಕೊಡುವಂತಿಲ್ಲ"

ಉಳ್ಳಾಲ: ಕೆಇಆರ್‌ಸಿ ಆದೇಶದಂತೆ ಈ ತಿಂಗಳು ವಿದ್ಯುತ್ ದರ ಏರಿಕೆಯಾಗಿದ್ದು ಉಳ್ಳಾಲ ಬೈಲ್‌ನ ಮನೆ ಯೊಂದಕ್ಕೆ 7.71ಲಕ್ಷ ರೂ. ವಿದ್ಯುತ್ ಬಿಲ್ ಬಂದದನ್ನ ಕಂಡು ಮನೆ ಮಾಲಕ ಶಾಕ್ ಆದ ಘಟನೆ ನಡೆದಿದೆ.
ಉಳ್ಳಾಲ ಬೈಲ್ ನ ಸದಾಶಿವ ಆಚಾರ್ಯ ಅವರ ಮನೆಗೆ ನಿನ್ನೆ ಬಂದ ಬಿಲ್ ರೀಡರ್ 7,71,072 ಬಿಲ್ ನೀಡಿ ತೆರಳಿದ್ದಾರೆ. ಮನೆ ಮಂದಿ 7 ಲಕ್ಷ ಬಿಲ್ ನೋಡಿ, ಬಿಲ್ ರೀಡಿಂಗ್ ಮಾಡಿದ ವ್ಯಕ್ತಿಯಲ್ಲಿ ವಿಚಾರಿಸಿದಾಗ "ಅದೆಲ್ಲ ನನಗೆ ಗೊತ್ತಿಲ್ಲ ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ" ಎಂದು ಉತ್ತರ ನೀಡಿ ತೆರಳಿದ್ದಾನೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಬಿಲ್ ರಿಸಿಪ್ಟಲ್ಲಿ 99,338 ಯೂನಿಟ್ ಖರ್ಚಾಗಿದ್ದು 7,71,072 ರೂ. ಬಿಲ್ ನಮೂದಿಸಲಾಗಿದೆ. ತಮಗೆ ಈ ಮೊದಲು 3,000 ರೂ. ದಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ನಾವು ಪ್ರತಿ ತಿಂಗಳು ಬಿಲ್ಲನ್ನ ಕಟ್ಟುತ್ತೇವೆ. ಈ ತಿಂಗಳು ಬಂದ ಬಿಲ್ ನೋಡಿ ಮನೆ ಮಂದಿ ಎಲ್ಲ ನಿಜಕ್ಕೂ ಶಾಕ್ ಆದೆವು ಎಂದು ಮನೆ ಮಾಲಕ ಸದಾಶಿವ ಆಚಾರ್ಯ ಹೇಳಿದ್ದಾರೆ.
ಈ ಬಗ್ಗೆ ಹೆಡ್ ಲೈನ್ ಕರ್ನಾಟಕ ಉಳ್ಳಾಲ ಉಪವಿಭಾಗ ಮೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಅವರಲ್ಲಿ ವಿಚಾರಿಸಿದಾಗ ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್ಲಲ್ಲಿ ಲೋಪ ಕಂಡು ಬಂದರೆ ಅದನ್ನ ಗ್ರಾಹಕರಿಗೆ ಕೊಡುವಂತಿಲ್ಲ. ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆ ಬಾಗಿಲಿಗೆ ಪರಿಷ್ಕೃತ ಬಿಲ್ ತಲುಪಿಸುವುದಾಗಿ ಹೇಳಿದ್ದು, ಇಂದು ಮಧ್ಯಾಹ್ನದ ವೇಳೆ ಪರಿಷ್ಕೃತ 2,833 ರೂ. ಬಿಲ್ ಆಚಾರ್ಯ ಅವರ ಮನೆ ತಲುಪಿದೆ.