ಈ.ಡಿ. ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ: ಸ್ಟಾಲಿನ್ ವಾಗ್ದಾಳಿ

ಚೆೆನ್ನೈ: ತನ್ನ ಸಂಪುಟದ ಸಹದ್ಯೋಗಿ ವಿ.ಸಂಥಿಲ್ ಬಾಲಾಜಿ ವಿರುದ್ಧ ಜಾರಿ ನಿರ್ದೇಶನಾಲಯ ಕಾನೂನುಕ್ರಮ ಕೈಗೊಂಡಿರುವುದಕ್ಕಾಗಿ ಬಿಜೆಪಿಯ ವಿರುದ್ಧ ಗುರುವಾರ ಕಟು ವಾಗ್ದಾಳಿ ನಡೆಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಕೇಸರಿ ಪಕ್ಷದ ನಾಯಕತ್ವವು ಜನವಿರೋಧಿ ರಾಜಕೀಯದಲ್ಲಿ ತೊಡಗಿದೆ ಹಾಗೂ ಜಾರಿನಿರ್ದೇಶನಾಲಯದ ಮೂಲಕ ರಾಜಕೀಯ ಮಾಡುತ್ತಿದೆ ಎಂದರು.
ಜಾರಿ ನಿರ್ದೇಶನಾಲಯದಿಂದ ಬಂಧಿತರಾದ ತಮಿಳುನಾಡಿನ ವಿದ್ಯುತ್ ಹಾಗೂ ಅಬಕಾರಿ ಸಚಿವ ಬಾಲಾಜಿ ಅವರಿಗೆ ಇ.ಡಿ.ಅಧಿಕಾರಿಗಳು ಮಾನಸಿಕ ಒತ್ತಡ ಹೇರಿದ್ದರಿಂದ ಅವರು ಅಸ್ವಸ್ಥಗೊಂಡಿದ್ದಾರೆಂದು ಸ್ಟಾಲಿನ್ ಹೇಳಿದರು.
‘‘ ಜಾರಿ ನಿರ್ದೇಶನಾಲಯವು ಸೆಂಥಿಲ್ ಬಾಲಾಜಿ ಅವರಿಗೆ ಅನ್ಯಾಯವಾಗಿ ತೊಂದರೆಗಳನ್ನು ನೀಡಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇದೊಂದು ಲಜ್ಜೆಗೆಟ್ಟ ರಾಜಕೀಯ ಪ್ರತೀಕಾರವೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. 10 ವರ್ಷಗಳಷ್ಟು ಹಳೆಯದಾದ ಪ್ರಕರಣವನ್ನು ಕೈಗೆತ್ತಿಕೊಂಡು, ಅವರನ್ನು ಬಂಧಿಸಲಾಗಿದೆ ಮತ್ತು ಅವರಿಗೆ ಮಾನಸಿಕ ಒತ್ತಡ ಹೇರಲಾಗಿದೆ. ಈ.ಡಿ.ಯಿಂದಾಗಿ ಅವರು ಈಗ ಮಾನಸಿಕವಾಗಿ ಹಾಗೂ ದೈಹಿಕವಾಗಿ ದುರ್ಬಲರಾಗಿದ್ದಾರೆ.
ಅಲ್ಲದೆ ಪ್ರಾಣಾಪಾಯಕಾರಿಯಾದ ಹೃದಯರೋಗದಿಂದಲೂ ಬಾಧಿತರಾಗಿದ್ದಾರೆ. ಇದಕ್ಕೆ ಹೆಚ್ಚಿನ ಲಜ್ಜೆಗೆಟ್ಟ ರಾಜಕೀಯ ಪ್ರತೀಕಾರ ಬೇರೇನಾದರೂ ಇದೆಯೇ? ಎಂದವರು ಪ್ರಶ್ನಿಸಿದ್ದಾರೆ.
ಒಂದು ವೇಳೆ ಏನಾದರೂ ದೂರು ಅಥವಾ ಸಂಬಂಧಪಟ್ಟ ಕೋರ್ಟ್ ಆದೇಶವನ್ನು ಆಧರಿಸಿ ಬಾಲಾಜಿ ಅವರನ್ನು ವಿಚಾರಣೆಗೊಳಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅವರು ತಲೆಮರೆಸಿಕೊಳ್ಳುವಂತಹ ಸಾಮಾನ್ಯ ವ್ಯಕ್ತಿಯಲ್ಲ. ಆದುದರಿಂದ ಅವರ ಬಂಧನವು ಸರಿಯಲ್ಲವೆಂದು ಸ್ಟಾಲಿನ್ ಅಭಿಪ್ರಾಯಿಸಿದರು.
ಸೆಂಥಿಲ್ ಚುನಾಯಿತ ಶಾಸಕನಾಗಿದ್ದು ಹಾಗೂ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಮತ್ತು ದ್ವಿತೀಯ ಬಾರಿಗೆ ಸಚಿವರಾಗಿದ್ದಾರೆ ಸ್ಟಾಲಿನ್ ಗಮನಸೆಳೆದರು.
‘‘ ಅವರನ್ನು ಭಯೋತ್ಪಾದಕನಂತೆ ಬಂಧಿಸಿ, ವಿಚಾರಣೆ ನಡೆಸುವ ಅಗತ್ಯವಾದರೂ ಏನಿದೆ?. ಈ.ಡಿ. ಅಧಿಕಾರಿಗಳು ಆಗಮಿಸಿದಾಗ ಅವರು ಸಂಪೂರ್ಣ ಸಹಕಾರ ನೀಡಿದ್ದರು ಹಾಗೂ ಅಧಿಕಾರಿಗಳು ತನ್ನಿಂದ ಯಾವುದೇ ವಿವರಣೆ ಕೇಳಿದರೂ ಅದನ್ನು ನೀಡಲು ಸಿದ್ಧನಿರುವುದಾಗಿಯೂ ಅವರು ತಿಳಿಸಿದ್ದಾರೆ. ಇದರ ಹೊರತಾಗಿಯೂ ಅವರನ್ನು 18 ತಾಸುಗಳ ಕಾಲ ಕೂಡಿಹಾಕಿ, ಯಾರೂ ಕೂಡಾ ಅವರನ್ನು ಭೇಟಿಯಾಗುವುದಕ್ಕೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಆವರ ಆರೋಗ್ಯ ಹದಗೆಟ್ಟ ಆನಂತರವಷ್ಟೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರು. ಒಂದು ವೇಳೆ ತುಸು ನಿರ್ಲಕ್ಷ್ಯ ವಹಿಸಿದ್ದರೂ ಸೆಂಥಿಲ್ ಅವರ ಜೀವಕ್ಕೆ ಅಪಾಯವುಂಟಾಗಬಹುದಿತ್ತು ಎಂದು ಸ್ಟಾಲಿನ್ ಕಳವಳ ವ್ಯಕ್ತಪಡಿಸಿದರು.
ಸೆಂಥಿಲ್ ಅವರು ಜಯಲಲಿತಾ ನೇತೃತ್ವದ ಸಂಪುಟದಲಿ ಸಾರಿಗೆ ಸಚಿವರಾಗಿದ್ದಾಗ, ನಡೆದಿತ್ತೆನ್ನಲಾದ ನೌಕರಿಗಾಗಿ ಲಂಚ ಹಗರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಅವರನ್ನು ಬುಧವಾರ ಬಂಧಿಸಿತ್ತು.ವಿಚಾರಣೆ ಸಂದರ್ಭ, ತನಗೆ ಎದೆನೋವಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘‘ ಈ.ಡಿ.ಚಟುವಟಿಕೆಗಳನ್ನು ಕಂಡಾಗ ದೇಶದಲ್ಲಿ ಆಘೋಷಿತ ತುರ್ತುಪರಿಸ್ಥಿತಿಯಿದೆಯೇ ಎಂಬ ಭಾವನೆ ಮೂಡುತ್ತದೆ. ಸರಳವಾಗಿ ಹೇಳುವುದಾದರೆ ಬಿಜೆಪಿ ನಾಯಕತ್ವವು ಈ.ಡಿ. ಮೂಲಕ ರಾಜಕೀಯ ಮಾಡಲು ಬಯಸುತ್ತಿದೆ. ಜನ ಸಂಪರ್ಕದ ಮೂಲಕ ರಾಜಕೀಯ ಮಾಡಲು ಅದು ಬಯಸುತ್ತಿಲ್ಲ. ಜನತೆ ಬಿಜೆಪಿಯ ಮೇಲೆ ವಿಶ್ವಾಸವಿರಿಸಲು ಸಿದ್ದರಿಲ್ಲ. ತಮಗೋಸ್ಕರ ರಾಜಕೀಯ ಮಾಡಿದಲ್ಲಿ ಮಾತ್ರವೇ ಜನತೆ ಬಿಜೆಪಿಯನ್ನು ನಂಬುತ್ತಾರೆ. ಬಿಜೆಪಿಯ ರಾಜಕೀಯ ಜನತಾ ವಿರೋಧಿ’’
-ಎಂ.ಕೆ.ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ







