ನೆರಿಯಕಾಡು ಕೊಲೆ ಪ್ರಕರಣದ ಆರೋಪ ಸಾಬೀತು: ಜೂ.16ರಂದು ಶಿಕ್ಷೆಯ ಪ್ರಮಾಣ ಪ್ರಕಟ

ಮಂಗಳೂರು, ಜೂ.15 ಕ್ಷುಲ್ಲಕ ಕಾರಣಕ್ಕಾಗಿ ತನ್ನ ಪತ್ನಿಗೆ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣನಾದ ಆರೋಪಿ ಪತಿಯ ವಿರುದ್ಧ ಕೊಲೆ ಆರೋಪ ಸಾಬೀತಾಗಿದ್ದು, ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಜೂ.16ರಂದು ಪ್ರಕಟಿಸುವುದಾಗಿ ಗುರುವಾರ ತಿಳಿಸಿದೆ.
ಧರ್ಮಸ್ಥಳ ಸಮೀಪದ ನೆರಿಯ ಗ್ರಾಮದ ನೆರಿಯ ಕಾಡು ಕೊಟ್ಟಕ್ಕರ ನಿವಾಸಿ ಮ್ಯಾಥ್ಯು ಎಂಬವರ ಪುತ್ರ ತೋಟದ ಕೆಲಸ ಮಾಡಿಕೊಂಡಿದ್ದ ಜಾನ್ಸನ್ ಕೆ.ಎಂ. (41) ಶಿಕ್ಷೆಗೊಳಗಾದ ಆರೋಪಿ.
ಜನವರಿ 21, 2021ರಂದು ಈತ 36ರ ಹರೆಯದ ಸೌಮ್ಯಾ ಫ್ರಾನ್ಸಿಸ್ ಎಂಬಾಕೆಯನ್ನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ಹಲ್ಲೆಗೈದಿದ್ದ. ಗಂಭೀರ ಗಾಯಗೊಂಡು ಅಸ್ವಸ್ಥಳಾದ ಸೌಮ್ಯಾಳನ್ನು ತನ್ನ ತಂದೆ ತಾಯಿಯ ಜೊತೆ ಸೇರಿ ಕಕ್ಕಿಂಜೆಯ ಆಸ್ಪತ್ರೆಗೆ ಕೊಂಡೊಯ್ದಿದ್ದ. ಬಳಿಕ ಉಜಿರೆಯ ಆಸ್ಪತ್ರೆಗೆ ಕರೆದೊಯ್ದಾಗ ಮೃತರಾಗಿರುವುದಾಗಿ ವೈದ್ಯರು ಘೋಷಿಸಿದ್ದರು.
ಈ ಬಗ್ಗೆ ಸೌಮ್ಯಾಳ ಸಹೋದರ ಸನೋಜ್ ಫ್ರಾನ್ಸಿಸ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವು ಧರ್ಮಸ್ಥಳ ಠಾಣೆಗೆ ವರ್ಗಾಯಿಸಲ್ಪಟ್ಟಿತು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಬೆಳ್ತಂಗಡಿ ವೃತ್ತ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ 23 ಮಂದಿ ಸಾಕ್ಷಿ ನುಡಿದಿದ್ದು, 40 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಹಲ್ಲೆಯ ವೇಳೆ ಹಳೆಯ ನಾಲ್ಕೈದು ಗಾಯಗಳಿದ್ದ ಕಾರಣ ಇದು ಕೊಲೆಯಲ್ಲ, ಆದರೆ ನರಹತ್ಯೆಯಾಗಿದೆ ಎಂದು ನ್ಯಾಯಾಧಿಶ ಎಚ್.ಎಸ್.ಮಲ್ಲಿಕಾರ್ಜುನ ಸ್ವಾಮಿ ತೀರ್ಮಾನಿಸಿದ್ದಾರೆ. ಸರಕಾರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಕ್ರಾಸ್ತಾ ವಾದ ಮಂಡಿಸಿದ್ದರು.