ಎಂಆರ್‌ಪಿಎಲ್ ನಿರ್ದೆಶಕರಿಂದ ತುಳುನಾಡಿಗೆ ಅನ್ಯಾಯ, ಬಹಿರಂಗ ಅವಮಾನ: ಮುನೀರ್ ಕಾಟಿಪಳ್ಳ ಆರೋಪ

ಸುರತ್ಕಲ್, ಜೂ.16: ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅವರು ಸಂಸ್ಥೆಯಲ್ಲಿ ಸ್ಥಳೀಯರಿಗೆ ಕೆಲಸ ಮಾಡುವ ಅರ್ಹತೆ ಇಲ್ಲ ಎಂದಿರುವುದು ತುಳುನಾಡಿಗೆ ಮಾಡಿದ ಘೋರ ಅನ್ಯಾಯ ಮಾತ್ರ ಅಲ್ಲ, ಬಹಿರಂಗ ಅವಮಾನ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.-
ಈ ಕುರಿತು ಪ್ರಕಟನೆ ನೀಡಿರುವ ಅವರು, ಎಷ್ಟು ಹೀನಾಯವಾಗಿ ನಡೆಸಿಕೊಂಡರೂ ಮಂಗಳೂರಿನ ಜನ ತಿರುಗಿ ಬೀಳುವುದಿಲ್ಲ ಎಂದು ಎಂಆರ್‌ಪಿಎಲ್ ಕಂಪೆನಿಗೆ ಚೆನ್ನಾಗಿ ತಿಳಿದಿದೆ. ಇಲ್ಲದಿದ್ದರೆ, ಬಹಿರಂಗವಾಗಿ ಇಷ್ಟು ದುರಹಂಕಾರದಿಂದ ಕಂಪೆನಿ ಎಂಡಿ ಪತ್ರಿಕಾಗೋಷ್ಟಿ ಕರೆದು "ಸ್ಥಳೀಯರಿಗೆ ಕಂಪೆನಿಯಲ್ಲಿ ಕೆಲಸ ಮಾಡುವ ಅರ್ಹತೆ ಇಲ್ಲ" ಎಂದು ಹೇಳುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊನ್ನೆಯಷ್ಟೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್ ಕಂಪೆನಿಯ ಇದೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ "ಸ್ಥಳೀಯರಿಗೆ ಆದ್ಯತೆ ಸಿಗಲಿದೆ" ಎಂದಿದ್ದರು. ಅದಾಗಿ ಒಂದು ವಾರದಲ್ಲಿ ಇದೀಗ "ಸ್ಥಳೀಯರಿಗೆ ಅರ್ಹತೆ ಇದ್ದರೆ ಉದ್ಯೋಗ ಸಿಗುತ್ತದೆ, ನಾವು ರಾಷ್ಟ್ರೀಯ ಮಟ್ಟದಲ್ಲಿ ಅರ್ಹರನ್ನು ಆಯ್ಕೆ ಮಾಡುತ್ತೇವೆ, ಸ್ಥಳೀಯರಿಗೆ ಆದ್ಯತೆ ನೀಡುವ ಪ್ರಶ್ನೆಯೇ ಇಲ್ಲ" ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದು ತುಳುನಾಡಿಗೆ ಮಾಡಿದ ಘೋರ ಅನ್ಯಾಯ ಮಾತ್ರ ಅಲ್ಲ, ಬಹಿರಂಗ ಅವಮಾನ. ತುಳುವ ಮಣ್ಣಿನ ಮಕ್ಕಳು ಇದನ್ನು ಸಹಿಸಿಕೊಳ್ಳಬಾರದು. ದೊಡ್ಡ ಧ್ವನಿಯಲ್ಲಿ ಪ್ರತಿಭಟಿಸಬೇಕು ಎಂದು ಮುನೀರ್ ಹೇಳಿದ್ದಾರೆ.
ಸ್ವಾಭೀಮಾನ ಇಲ್ಲದ ಸಂಸದ, ಶಾಸಕರು
"ಬಿಜೆಪಿ ಸಂಸದ, ಶಾಸಕರಿಗೆ ಸ್ವಾಭಿಮಾನ ಇಲ್ಲದಿರಬಹುದು, ಅವರು ಉತ್ತರ ಭಾರತದ ಗುಲಾಮಗಿರಿಗೆ ಒಗ್ಗಿರಬಹುದು. ತುಳುನಾಡು ಹಾಗಲ್ಲ, ಇದು ಕೋಟಿ ಚೆನ್ನಯರ, ಕಾನದ ಕಟದರ, ರಾಣಿ ಅಬ್ಬಕ್ಕರ ನೆಲ. ಉದ್ಯೋಗದ ಹಕ್ಕು ಪಡದೇ ತೀರಬೇಕು. ಕಂಪೆನಿಗಳ ಅಹಂಕಾರ, ನಿಕೃಷ್ಟವಾಗಿ ಕಾಣುವ ನಡೆಗೆ ಕಡಿವಾಣ ಹಾಕಬೇಕು".
- ಮುನೀರ್ ಕಾಟಿಪಳ್ಳ, ಹೋರಾಟಗಾರ







