ಮಾನವ ದೇಹದ ಭಾಗಗಳ ಮಾರಾಟ: ಹಾರ್ವರ್ಡ್ ಮೆಡಿಕಲ್ ಕಾಲೇಜು ಶವಾಗಾರದ ಮ್ಯಾನೇಜರ್ ವಿರುದ್ಧ ಪ್ರಕರಣ

ವಾಷಿಂಗ್ಟನ್: ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಮ್ಯಾನೇಜರ್ ಆಗಿದ್ದ ಸೆಡ್ರಿಕ್ ಲಾಜ್ ವಿರುದ್ಧ ಶಾಲೆಯ ಶವಾಗಾರದಿಂದ ಮಾನವ ದೇಹದ ಭಾಗಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಸ್ಟನ್ನಲ್ಲಿರುವ ಮೆಡಿಕಲ್ ಶಾಲೆಯ ಶವಾಗಾರಕ್ಕೆ ದಾನ ಮಾಡಿದ(ವೈದ್ಯಕೀಯ ವಿದ್ಯಾರ್ಥಿಗಳ ತರಬೇತಿಗೆ) ಮೃತದೇಹಗಳ ತಲೆ, ಮೆದುಳು, ಚರ್ಮ, ಮೂಳೆಗಳು ಮತ್ತು ಇತರ ಭಾಗಗಳನ್ನು ಅಲ್ಲಿ ಮ್ಯಾನೇಜರ್ ಆಗಿದ್ದ 55 ವರ್ಷದ ಸೆಡ್ರಿಕ್ ಲಾಜ್ ಕದ್ದು ಅವನ್ನು ಹ್ಯಾಂಪ್ಶೈರ್ನಲ್ಲಿರುವ ತನ್ನ ನಿವಾಸಕ್ಕೆ ಸಾಗಿಸುತ್ತಿದ್ದ. ಇದಕ್ಕೆ ಆತನ ಪತ್ನಿ ಡೆನಿಸ್ ಸಹಕಾರ ನೀಡಿದ್ದಳು. ಇವರಿಬ್ಬರ ಜತೆ, ಮಾನವ ದೇಹದ ಭಾಗಗಳ ಮಾರಾಟಕ್ಕೆ ಸಹಕರಿಸಿದ್ದ ಕತ್ರಿನಾ ಮೆಕ್ಲೀನ್, ಜೊಷುವಾ ಟೇಲರ್, ಮ್ಯಾಥ್ಯೂ ಲ್ಯಾಂಪಿ, ಜೆರೆಮಿ ಪೌಲ್ ಮತ್ತು ಕ್ಯಾಂಡೇಸ್ ಚಾಪ್ಮನ್ ಸ್ಕಾಟ್ ಎಂಬವರ ವಿರುದ್ಧವೂ ಪೆನಿಸಿಲ್ವೇನಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೇ 6ರಂದು ಸೆಡ್ರಿಕ್ನನ್ನು ಮ್ಯಾನೇಜರ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಶೈಕ್ಷಣಿಕ ಉದ್ದೇಶಗಳಿಗಾಗಿ ಜನರು ಸ್ವಯಂಪ್ರೇರಣೆಯಿಂದ ಮಾನವ ಅವಶೇಷಗಳನ್ನು ಹಾರ್ವರ್ಡ್ನ ವೈದ್ಯಕೀಯ ಶಾಲೆಗೆ ದಾನ ಮಾಡುತ್ತಾರೆ. ಅವಶೇಷಗಳನ್ನು ಹೆಚ್ಚಿನ ಸಂದರ್ಭ ದಹಿಸಲಾಗುತ್ತದೆ, ಕೆಲವೊಮ್ಮೆ ದಾನಿಯ ಕುಟುಂಬಕ್ಕೆ ಹಿಂತಿರುಗಿಸಲಾಗುತ್ತದೆ.







