ಮಲೇಶ್ಯಾದಲ್ಲಿ ವಲಸೆ ಕಾರ್ಮಿಕರಿಂದ ಬಲವಂತದ ದುಡಿಮೆ: ವಿಶ್ವಸಂಸ್ಥೆ ವರದಿ

ಕೌಲಲಾಂಪುರ: ಮಲೇಶ್ಯಾದಲ್ಲಿ ದೇಶೀಯ ಕುಟುಂಬಗಳಲ್ಲಿ ಕೆಲಸ ಮಾಡುವ ಸುಮಾರು ಮೂರನೇ ಒಂದರಷ್ಟು ವಲಸೆ ಕಾರ್ಮಿಕರು ಬಲವಂತದ ಕಾರ್ಮಿಕ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಕಾರ್ಮಿಕ ಸಂಘಟನೆ ಗುರುವಾರ ಬಿಡುಗಡೆಗೊಳಿಸಿದ ಸಮೀಕ್ಷಾ ವರದಿ ಹೇಳಿದೆ.
ವಲಸೆ ಕಾರ್ಮಿಕರು ಅಧಿಕ ಕೆಲಸದ ಅವಧಿ, ಹೆಚ್ಚುವರಿ ದುಡಿಮೆಗೆ(ಓವರ್ಟೈಮ್) ವೇತನ ನೀಡದಿರುವುದು, ಕಡಿಮೆ ಸಂಬಳ, ಚಲನವಲನಕ್ಕೆ ನಿರ್ಬಂಧ ಮತ್ತು ಬಲವಂತದ ಕಾರ್ಮಿಕರ ಸೂಚಕಗಳಲ್ಲಿ ಉಲ್ಲೇಖಿಸಿರುವ ಪರಿಸ್ಥಿತಿಯಲ್ಲಿ ಇರುವುದನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್ಒ) ಗುರುತಿಸಿದೆ. ಆಗ್ನೇಯ ಏಶ್ಯಾದಲ್ಲಿ 1,201 ಮನೆಗೆಲಸದವರನ್ನು ಸಂದರ್ಶಿಸಿ ನಡೆಸಿರುವ ಸಮೀಕ್ಷೆಯ ಪ್ರಕಾರ, ಮಲೇಶ್ಯಾದಲ್ಲಿನ ವಲಸೆ ಕಾರ್ಮಿಕರಲ್ಲಿ 29%ದಷ್ಟು ಮಂದಿ ಬಲವಂತದ ದುಡಿಮೆಯ ಸಂಕಷ್ಟದಲ್ಲಿದ್ದರೆ, ನೆರೆಯ ದೇಶಗಳಾದ ಸಿಂಗಾಪುರ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಈ ಪ್ರಮಾಣ ಅನುಕ್ರಮವಾಗಿ 7% ಮತ್ತು 4%ದಷ್ಟಿವೆ. ಈ ಮೂರೂ ದೇಶಗಳಲ್ಲಿ ಸಮೀಕ್ಷೆಗೆ ಒಳಪಟ್ಟ ಮನೆಗೆಲಸದವರ ಸರಾಸರಿ ಕೆಲಸದ ಅವಧಿ ಇತರ ಕಾರ್ಮಿಕರಿಗೆ ನಿಗದಿಪಡಿಸಿದ್ದಕ್ಕಿಂತ ಬಹಳಷ್ಟು ಅಧಿಕವಾಗಿದೆ ಮತ್ತು ಯಾರು ಕೂಡಾ ಕನಿಷ್ಟ ವೇತನ ಸಂಪಾದಿಸಿಲ್ಲ ಎಂದು ಐಎಲ್ಒ ಹೇಳಿದೆ.
ಮನೆಕೆಲಸವು ನಮ್ಮ ಸಮಾಜದಲ್ಲಿ ಅತ್ಯಂತ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದ್ದರೂ ಮನೆಕೆಲಸದವರಿಗೆ ಇನ್ನೂ ಕನಿಷ್ಟ ರಕ್ಷಣೆಯನ್ನು ಒದಗಿಸಲಾಗಿದೆ. ಇದನ್ನು ಇನ್ನು ಮುಂದೆ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ತಾಂತ್ರಿಕ ಮಾರ್ಗದರ್ಶಕಿ ಅನ್ನಾ ಎಂಗ್ಬ್ಲೋಮ್ ಹೇಳಿದ್ದಾರೆ. ಗೃಹ ಕಾರ್ಮಿಕರು ಮತ್ತು ಬಲವಂತದ ದುಡಿಮೆ ಮಾಡುತ್ತಿರುವವರಿಗೆ ವಿಶ್ವಸಂಸ್ಥೆಯ ಅಧಿವೇಶನ ಸೂಚಿಸಿರುವ ವ್ಯವಸ್ಥೆ ಒದಗಿಸುವಂತೆ , ಮನೆಗೆಲಸದ ಕೌಶಲ್ಯವನ್ನು ಗುರುತಿಸುವಂತೆ, ಮತ್ತು ಜೀತ ಕಾರ್ಮಿಕ ಪ್ರಕ್ರಿಯೆಗೆ ಅವಕಾಶ ಕೊಡದಂತೆ ವಲಸೆ ಮಾರ್ಗಗಳನ್ನು ಖಚಿತಪಡಿಸುವಂತೆ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ ಮಲೇಶ್ಯಾ, ಸಿಂಗಾಪುರ ಮತ್ತು ಥೈಲ್ಯಾಂಡ್ ದೇಶಗಳನ್ನು ಆಗ್ರಹಿಸಿದೆ.
ಏಶ್ಯಾದ ಕುಟುಂಬಗಳು ಸಾಮಾನ್ಯವಾಗಿ ಇಂಡೊನೇಶ್ಯಾ, ಮ್ಯಾನ್ಮಾರ್ ಮತ್ತು ಫಿಲಿಪ್ಪೀನ್ಸ್ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಮನೆಗೆಲಸದವರನ್ನು(ಹೆಚ್ಚಾಗಿ ಮಹಿಳೆಯರನ್ನು) ಅಡುಗೆ, ಸ್ವಚ್ಛತೆ, ಮಗುವಿನ ಪಾಲನೆ, ತೋಟಗಾರಿಕೆ ಮತ್ತಿತರ ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಮಲೇಶ್ಯಾದಲ್ಲಿ ಮನೆಕೆಲಸದವರಿಗೆ ದೌರ್ಜನ್ಯ ಎಸಗಿದ ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗಿದ್ದರೆ, ಮಲೇಶ್ಯಾದ ಸಂಸ್ಥೆಗಳು ವಲಸೆ ಕಾರ್ಮಿಕರಿಂದ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, ಮಲೇಶ್ಯಾದಲ್ಲಿ ಮನೆಕೆಲಸ ಮಾಡುತ್ತಿರುವವರಲ್ಲಿ ಸುಮಾರು 80%ದಷ್ಟು ಇಂಡೊನೇಶ್ಯದವರು. ಮನೆಕೆಲಸದವರಿಗೆ ರಕ್ಷಣೆ ಒದಗಿಸುವ ಬಗ್ಗೆ ಕಳೆದ ವರ್ಷ ಮಲೇಶ್ಯಾ ಮತ್ತು ಇಂಡೊನೇಶ್ಯಾ ನಡುವೆ ಒಪ್ಪಂದ ಏರ್ಪಟ್ಟಿದೆ. ಥೈಲ್ಯಾಂಡ್ನಲ್ಲಿ ಮನೆಕೆಲಸದವರ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಯನ್ನು 2012ರಲ್ಲಿ ಜಾರಿಗೊಳಿಸಿದ ಬಳಿಕ ಮನೆಕೆಲಸದವರ ಪರಿಸ್ಥಿತಿ ಸುಧಾರಿಸಿದೆ ಎಂದು ಥೈಲ್ಯಾಂಡ್ನ ಕಾರ್ಮಿಕ ಸಚಿವಾಲಯ ಹೇಳಿದೆ.